ಇಂದು ಎಲ್ಲದಕ್ಕೂ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೆಸರೆತ್ತುವುದು ಫ್ಯಾಷನ್ ಆಗಿ ಹೋಗಿದೆ. ಇಷ್ಟು ಬಾರಿ ದೇವರ ಹೆಸರನ್ನು ಹೇಳಿದ್ದರೆ, ಏಳು ಜನ್ಮದ ಸ್ವರ್ಗವಾದರೂ ಸಿಕ್ಕಿರುತ್ತಿತ್ತು ಎಂದು ವಿರೋಧ ಪಕ್ಷಗಳ ವಿರುದ್ಧ ಅಮಿತ್ ಶಾ ವಾಗ್ದಾಳಿ ನಡೆಸಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಒಂದರ ಹಿಂದೆ ಒಂದರಂತೆ ಹಲವಾರು ಟ್ವೀಟ್‌ಗಳನ್ನು ಮಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಹಾಗೂ ಅದರ ಕುತಂತ್ರಗಳು ಹಲವು ವರ್ಷಗಳ ದುಷ್ಕೃತ್ಯಗಳನ್ನು ಮರೆಮಾಚಲಾಗದು ಎಂದು ಹೇಳಿದರು.
ಈ ವಿಚಾರ ಕುರಿತು ಮೋದಿ ಟ್ವೀಟ್ ಮಾಡಿ, ಅಂಬೇಡ್ಕರ್ ಅವರ ಪರಂಪರೆಯನ್ನು ಅಳಿಸಿಹಾಕಲು ಮತ್ತು ಎಸ್‌ಸಿ, ಎಸ್‌ಟಿ ಸಮುದಾಯಗಳನ್ನು ಅವಮಾನಿಸಲು ಕಾಂಗ್ರೆಸ್ ಹೇಗೆ ಕುತಂತ್ರಗಳನ್ನು ಮಾಡಿತ್ತೆಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಎಷ್ಟೇ ಪ್ರಯತ್ನಿಸಿದರೂ ಎಸ್‌ಸಿ/ಎಸ್‌ಟಿ ಸಮುದಾಯಗಳ ವಿರುದ್ಧ ಅತ್ಯಂತ ಭೀಕರ ಹತ್ಯಾಕಾಂಡಗಳು ತಮ್ಮ ಆಡಳಿತದ ಅವಧಿಯಲ್ಲಿ ನಡೆದಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳನ್ನು ಬಲಪಡಿಸಲು ಏನನ್ನೂ ಮಾಡಲಿಲ್ಲ. ಸಂಸತ್‌ನಲ್ಲಿ ಗೃಹ ಸಚಿವ ಅಮಿತ್ ಶಾ ಜಿ ಅವರು ಡಾ. ಅಂಬೇಡ್ಕರ್ ಅವರನ್ನು ಅವಮಾನಿಸಿದ ಮತ್ತು ಎಸ್‌ಸಿ/ಎಸ್‌ಟಿಯನ್ನು ಕಡೆಗಣಿಸಿದ ಕಾಂಗ್ರೆಸ್‌ನ ಕರಾಳ ಇತಿಹಾಸವನ್ನು ಬಹಿರಂಗಪಡಿಸಿದ್ದಾರೆ.
ಅವರು ಹೇಳಿರುವ ಸತ್ಯ ನೋಡಿ ಆತಂಕಕ್ಕೊಳಗಾಗಿ ಅಮಿತ್ ಶಾ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ ಎಂದರು ಹೇಳಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ದೇಶದ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.
ಮಂಗಳವಾರ ರಾಜ್ಯಸಭೆಯಲ್ಲಿ ಭಾರತದ ಸಂವಿಧಾನದ 75 ವರ್ಷಗಳ ವೈಭವದ ಪಯಣ ಎಂಬ ವಿಷಯದ ಕುರಿತು ಎರಡು ದಿನಗಳ ಚರ್ಚೆಗೆ ಉತ್ತರಿಸಿದ ಅಮಿತ್ ಶಾ ಅವರು ಮಂಗಳವಾರ ತಮ್ಮ ಭಾಷಣದಲ್ಲಿ ಬಾಬಾಸಾಹೇಬರನ್ನು ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಆರೋಪಿಸುತ್ತಿವೆ.