ದಕ್ಷಿಣ ಭಾರತದಲ್ಲಿ ಅನೇಕ ಸುಂದರವಾದ ಗಿರಿಧಾಮಗಳಿವೆ. ಅವುಗಳು ಒಂದಕ್ಕಿಂತ ಒಂದು ಉತ್ತಮವಾಗಿವೆ. ಊಟಿ, ಕೊಡೈಕೆನಾಲ್, ಯೆರ್ಕಾಡ್, ಯಳಗಿರಿ, ಕೂನೂರು, ಕೋಟಗಿರಿ, ಮುನ್ನಾರ್, ತೆಕ್ಕಡಿ, ಅತಿರಪಲ್ಲಿ, ತೆಕ್ಕಡಿ, ವಯನಾಡ್, ಪೊನ್ಮುಡಿ, ಕೂರ್ಗ್, ಬಿಆರ್ ಹಿಲ್ಸ್, ಚಿಕ್ಕಮಗಳೂರು, ಆಗುಂಬೆ, ಸಕಲೇಶಪುರ, ಕೆಮ್ಮಣ್ಣುಗುಂಡಿ, ಅರಕು ಕಣಿವೆ, , ಹಾರ್ಸ್ಲಿ ಹಿಲ್ಸ್ ಸೇರಿದಂತೆ ಇನ್ನು ಸಾಕಷ್ಟು ಗಿರಿಧಾಮಗಳು ನಮ್ಮ ದಕ್ಷಿಣ ಭಾರತದಲ್ಲಿವೆ.
ಇಷ್ಟು ಹಿಲ್ ಸ್ಟೇಷನ್ ಗಳಲ್ಲಿ ‘ದಕ್ಷಿಣ ಕಾಶ್ಮೀರ’ ಎಂದು ಕರೆಯಲ್ಪಡುವ ಗಿರಿಧಾಮವೆಂದರೆ ಅದು ಕೇರಳ ರಾಜ್ಯದ ಮುನ್ನಾರ್.
ಮುನ್ನಾರ್- ಕೇರಳದ ಚಿಲ್ ಹಿಲ್ ಸ್ಟೇಷನ್
ಹೌದು, ಕೇರಳದಲ್ಲಿರುವ ಮುನ್ನಾರ್ ಹೆಚ್ಚು ತಂಪಾಗಿರುತ್ತದೆ. ಈ ಕಾರಣದಿಂದಲೇ ಈ ಗಿರಿಧಾಮವನ್ನು ಚಿಲ್ ಹಿಲ್ ಸ್ಟೇಷನ್ ಎಂದು ಕರೆಯುತ್ತಾರೆ. ಇನ್ನು, ಮುನ್ನಾರ್ ಅನ್ನು ‘ದಕ್ಷಿಣದ ಕಾಶ್ಮೀರ’ ಎಂದೇ ಪರಿಗಣಿಸಲಾಗಿದೆ. ಸಮುದ್ರಮಟ್ಟದಿಂದ ಸುಮಾರು 1600 ಮೀಟರ್ಗಳಷ್ಟು ಎತ್ತರದಲ್ಲಿ ನೆಲೆಸಿರುವ ಈ ಗಿರಿಧಾಮವು ಚಹಾದ ತೋಟಗಳು, ಅಂಕುಡೊಂಕಾದ ರಸ್ತೆಗಳು, ಮಂಜಿನಿಂದ ಕೂಡಿದ ವಾತಾವರಣದಿಂದ ಹೆಸರುವಾಸಿಯಾಗಿದೆ. ಮಧುಚಂದ್ರಕ್ಕಾಗಿ ನವ ಜೋಡಿಗಳು ಹೆಚ್ಚಾಗಿ ಮುನ್ನಾರ್ನಂತಹ ರಮಣೀಯವಾದ ತಾಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಬ್ರಿಟಿಷ್ ಸರ್ಕಾರದ ಬೇಸಿಗೆ ರೆಸಾರ್ಟ್
ಈ ಗಿರಿಧಾಮವು ಒಂದು ಕಾಲದಲ್ಲಿ ಬ್ರಿಟಿಷರ ಬೇಸಿಗೆ ತಾಣವಾಗಿತ್ತು. ಇದಕ್ಕೆ ಪ್ರಮುಖ ಕಾರಣ, ವಿಸ್ತಾರವಾದ ಚಹಾದ ತೋಟಗಳು, ಬಗೆ ಬಗೆ ಪ್ರಾಣಿಗಳನ್ನು ಇಲ್ಲಿ ನೋಡಬಹುದು. ಒಟ್ಟಾರೆ ಪ್ರಕೃತಿಯಿಂದ ಈ ತಾಣ ಆಶೀರ್ವದಿಸಲ್ಪಟ್ಟಿದೆ. ಮುನ್ನಾರ್ 12 ವರ್ಷಗಳಿಗೊಮ್ಮೆ ಅರಳುವ ಅಪರೂಪದ ನೀಲಕುರಿಂಜಿ ಹೂವುಗಳಿಗೆ ಹೆಸರುವಾಸಿಯಾಗಿದೆ.
ಮುನ್ನಾರ್ಗೆ ಹೋದಾಗ ಸಾಹಸಿಗಳು ಟ್ರೆಕ್ಕಿಂಗ್, ಕ್ಯಾಂಪಿಂಗ್, ಪ್ಯಾರಾಗ್ಲೈಡಿಂಗ್ ಮತ್ತು ಬೋಟಿಂಗ್ ಗಳನ್ನು ಕೈಗೊಳ್ಳಬಹುದು. ಪ್ರವಾಸಿಗರು ಉಳಿಯಲು ಅನೇಕ ಹೋಂ ಸ್ಟೇ, ರೆಸಾರ್ಟ್ ಗಳು ಇಲ್ಲಿವೆ.
ಮುನ್ನಾರ್ ಗೆ ಭೇಟಿ ನೀಡಲು ಉತ್ತಮ ಸಮಯ ಯಾವುದು?
ಮುನ್ನಾರ್ ತನ್ನ ಆಹ್ಲಾದಕರವಾದ ವಾತಾವರಣದಿಂದ ವರ್ಷವಿಡೀ ಪ್ರಕೃತಿ ಪ್ರೇಮಿಗಳನ್ನು ಆಕರ್ಷಿಸುತ್ತದೆ. ಇನ್ನು, ಇಲ್ಲಿಗೆ ಹೋಗಲು ಸೆಪ್ಟೆಂಬರ್ ನಿಂದ ಮಾರ್ಚ್ ವರೆಗೆ ಉತ್ತಮವಾದ ಸಮಯವಾಗಿದೆ. ಮಳೆಗಾಲದಲ್ಲಿ ಮುನ್ನಾರ್ ಗೆ ಪ್ಲಾನ್ ಮಾಡದೇ ಇರುವುದೇ ಒಳ್ಳೆಯದು.
ಮುನ್ನಾರ್ ನ ಪ್ರವಾಸಿ ತಾಣಗಳು
ಎಕೋ ಪಾಯಿಂಟ್
ಅಟುಕ್ಕಾಡ್ ಜಲಪಾತ
ಮುನ್ನಾರ್ ಚಹಾ ತೋಟಗಳು
ಎರವಿಕುಲಂ ರಾಷ್ಟ್ರೀಯ ಉದ್ಯಾನವನ
ರೋಸ್ ಗಾರ್ಡನ್ಸ್ ಮುನ್ನಾರ್
ಮುನ್ನಾರ್ ಗೆ ಹೇಗೆ ತಲುಪಬೇಕು?
ಬೆಂಗಳೂರಿನಿಂದ ಮುನ್ನಾರ್ ಗೆ ರಸ್ತೆ ಮೂಲಕ ಸುಮಾರು 476 ಕಿ.ಮೀ ದೂರದಲ್ಲಿದೆ. ವಿಮಾನದಿಂದ ಪ್ರಯಾಣಿಸಿದರೆ 326 ಕಿ.ಮೀ ದೂರದಲ್ಲಿದೆ. ಒಂದು ವೇಳೆ ನೀವು ಕಾರಿನಲ್ಲಿ ಮುನ್ನಾರ್ ಗೆ ಪ್ರಯಾಣಿಸಿದರೆ 8 ಗಂಟೆ 48 ನಿಮಿಷ ಪ್ರಯಾಣಿಸಬೇಕಾಗುತ್ತದೆ.
ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮುನ್ನಾರ್ ಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಸುಮಾರು 110 ಕಿ,ಮೀ ದೂರದಲ್ಲಿ ಮುನ್ನಾರ್ ಗಿರಿಧಾಮವಿದೆ. ಮಧುರೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೂಡ ನೀವು ಮುನ್ನಾರ್ ಗೆಭೇಟಿ ನೀಡಬಹುದು. ಮುನ್ನಾರ್ಗೆ ತಲುಪಲು 140 ಕಿ.ಮೀ ರಸ್ತೆ ಪ್ರಯಾಣ ಮಾಡಬೇಕು.
ಮುನ್ನಾರ್ ಗೆ ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಆಲುವಾ ರೈಲ್ವೆ ನಿಲ್ದಾಣವಾಗಿದೆ.