ಮನೆ ಯೋಗ ಹೃದಯದ ಆರೋಗ್ಯಕ್ಕೆ ಈ ಯೋಗಾಸನ ಸಹಕಾರಿ

ಹೃದಯದ ಆರೋಗ್ಯಕ್ಕೆ ಈ ಯೋಗಾಸನ ಸಹಕಾರಿ

0

ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಯೋಗವು ಸಹಕಾರಿ. ಹಾಗಾದರೆ ಹೃದಯದ ಆರೋಗ್ಯಕ್ಕೆ ಯಾವ ಯೋಗಾಸನಗಳು ಬೆಸ್ಟ್‌ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಅರ್ಧ ಮತ್ಸೇಂದ್ರಾಸನ

  • ನೆಲದ ಮೇಲೆ ಕುಳಿತು ನಿಮ್ಮ ಕಾಲುಗಳನ್ನು ಮುಂಭಾಗಕ್ಕೆ ಚಾಚಿ
  • ಈಗ ನಿಮ್ಮ ಮಂಡಿಗಳನ್ನು ಬಾಗಿಸಿ ನಿಮ್ಮ ಬಲಗಡೆಯ ಮಂಡಿಯನ್ನು ಯೋಗ ಚಾಪೆಯ ಮೇಲೆ ಇರಿಸಿ, ಬಲ ಪಾದವನ್ನು ಎಡಬದಿಯ ಸೊಂಟದ ಕಡೆಗೆ ಬರುವಂತೆ ಇಟ್ಟುಕೊಳ್ಳಬೇಕು. ನಿಮ್ಮ ಎಡ ಮೊಣಕೈ ಭಾಗವನ್ನು ಋ ಕಾಲಿನ ಕಡೆಗೆ ಇರಿಸಿಕೊಳ್ಳಬೇಕು
  • ನಿಮ್ಮ ಬಲಗೈ ಅನ್ನು ತಲೆಯ ಮೇಲೆತ್ತಿ ನಿಧಾನವಾಗಿ ಹಿಂಬದಿಗೆ ತೆಗೆದುಕೊಂಡು, ನಿಮ್ಮ ಸೊಂಟದ ಹಿಂದಿರುವ ಯೋಗ ಚಾಪೆಯ ಮೇಲೆ ಇರಿಸಿಕೊಳ್ಳಬೇಕು
  • ಈಗ ನಿಮ್ಮ ಬಲಗೈ ತೋಳನ್ನು ತಲೆಯ ಮೇಲೆ ಬರುವಂತೆ ತಂದು, ಕ್ರಮೇಣವಾಗಿ ಅದನ್ನು ನಿಮ್ಮ ಎಡ ತೊಡೆಯ ಕಡೆಗೆ ಬರುವಂತೆ ಮಾಡಿ ನಿಮ್ಮ ಮುಖವನ್ನು ಎಡ ಬದಿಗೆ ತಿರುಗಿಸಿ
  • ನಿಮ್ಮ ಕುತ್ತಿಗೆಯನ್ನು, ಸೊಂಟವನ್ನು ಮತ್ತು ಭುಜಗಳನ್ನು ಬಲಗಡೆಗೆ ತಿರುಗಿಸಿ, ನೀವು ನಿಮ್ಮ ಬಲಗಡೆಯ ಭುಜವನ್ನು ನೋಡುತ್ತಿರಬೇಕು, ನಿಮ್ಮ ಬೆನ್ನುಹುರಿಯನ್ನು ನೇರವಾಗಿ ಇರಿಸಿಕೊಳ್ಳಬೇಕು. ಈ ಸಂದರ್ಭದಲ್ಲಿ ಉಸಿರಾಟ ನಡೆಸಬೇಕು
  • ಇದೇ ಭಂಗಿಯಲ್ಲಿ ಕೆಲವು ಸೆಕೆಂಡುಗಳು ಇದ್ದು, ಆನಂತರ ಸಹಜ ಸ್ಥಿತಿಗೆ ಮರಳಿ ಬನ್ನಿ. ಇನ್ನೊಂದು ಕಡೆಗೂ ಕೂಡ ಇದೇ ರೀತಿ ಮಾಡಿ.

ಸೇತುಬಂದಾಸನ

  • ನಿಮ್ಮ ಬೆನ್ನಿನ ಭಾಗದಲ್ಲಿ ಮಲಗಿ ಮಂಡಿಯನ್ನು ಮಡಿಸಿ ಪಾದಗಳನ್ನು ನೆಲದ ಮೇಲೆ ಇಟ್ಟುಕೊಳ್ಳಿ. ನಿಮ್ಮ ಎರಡು ಕಾಲುಗಳನ್ನು ಸ್ವಲ್ಪ ಅಕ್ಕಪಕ್ಕ ಇರಿಸಿ.
  • ನಿಮ್ಮ ಎರಡು ಕೈಗಳು ನಿಮ್ಮ ದೇಹದ ಅಕ್ಕಪಕ್ಕ ಇರಬೇಕು. ಜೊತೆಗೆ ನಿಮ್ಮ ಅಂಗೈಗಳು ನೆಲ ನೋಡ ಬೇಕು.
  • ಈಗ ನಿಮ್ಮ ಎರಡು ಪಾದಗಳನ್ನು ನೆಲದ ಕಡೆಗೆ ಒತ್ತಿ, ದೀರ್ಘವಾಗಿ ಉಸಿರನ್ನು ತೆಗೆದುಕೊಂಡು ನಿಮ್ಮ ಸೊಂಟವನ್ನು ಮೇಲೆತ್ತಿ ನಿಮ್ಮ ಬೆನ್ನುಹುರಿಯನ್ನು ಸ್ವಲ್ಪ ತಿರುಗಿಸಿ.
  • ನಿಮ್ಮ ಎದೆಯನ್ನು ಮೇಲೆತ್ತಲು ನಿಮ್ಮ ಭುಜಗಳು ಹಾಗೂ ತೋಳುಗಳನ್ನು ನೆಲಕ್ಕೆ ಒತ್ತಬೇಕು. ನೀವು ಈ ಸಂದರ್ಭದಲ್ಲಿ ಬೆಂಬಲಕ್ಕಾಗಿ ನಿಮ್ಮ ಕಾಲುಗಳನ್ನು ಸಪೋರ್ಟ್ ಕೊಟ್ಟುಕೊಳ್ಳಬಹುದು. ಇದೇ ಭಂಗಿಯಲ್ಲಿ ಇದ್ದು, ಸುಮಾರು ನಾಲ್ಕರಿಂದ ಎಂಟು ಬಾರಿ ಉಸಿರಾಡಿ ಮತ್ತೆ ಸಹಜ ಸ್ಥಿತಿಗೆ ಬನ್ನಿ.

ಉತ್ತಿಕ ತ್ರಿಕೋನಾಸನ

  • ಮೊದಲಿಗೆ ಯೋಗ ಚಾಪೆಯ ಮೇಲೆ ಕಾಲುಗಳನ್ನು ಸ್ವಲ್ಪ ದೂರ ಸರಿಸಿ ನೇರವಾಗಿ ನಿಂತುಕೊಳ್ಳಬೇಕು.
  • ಈಗ ನಿಮ್ಮ ಎಡಪಾದವನ್ನು ಎಡಗಡೆಗೆ ತಿರುಗಿಸಿ ಇಟ್ಟು ಬಲಪಾದವನ್ನು ನಿಮ್ಮ ದೇಹದ ಕಡೆಗೆ ತಿರುಗಿಸಿ ಇಡಬೇಕು.
  • ಮುಂದೆ ನೋಡುತ್ತಾ ಉಸಿರನ್ನು ದೀರ್ಘವಾಗಿ ಒಳ ತೆಗೆದುಕೊಳ್ಳಬೇಕು. ಈ ಸಮಯದಲ್ಲಿ ಕೈಗಳನ್ನು ಮೇಲೆತ್ತಿರಬೇಕು. ನಿಮ್ಮ ದೇಹ ಈ ಸಂದರ್ಭದಲ್ಲಿ T ಆಕಾರದಲ್ಲಿ ಕಾಣಬೇಕು.
  • ಈಗ ಉಸಿರನ್ನು ಹೊರ ಬಿಟ್ಟು, ನಿಧಾನವಾಗಿ ನಿಮ್ಮ ಎಡಗೈ ಅನ್ನು ಬಾಗಿಸಿ ನೀವು ಸಹ ಬಾಗಬೇಕು. ನಿಮ್ಮ ಬಲಗೈ ಮೇಲೆತ್ತಿ ಬೆರಳುಗಳು ತಾರಸಿ ಕಡೆಗೆ ಮುಖ ಮಾಡಿರಬೇಕು.
  • ಸಾಧ್ಯವಾದಷ್ಟು ನಿಮ್ಮ ದೇಹದ ಬದಿ ನೆಲದ ಭಾಗಕ್ಕೆ ಪ್ಯಾರಲಲ್ ಆಗಿರುವಂತೆ ನಿಂತುಕೊಳ್ಳಬೇಕು. ನಿಮ್ಮ ಕುತ್ತಿಗೆ ಸಹ ಇದೇ ರೀತಿ ಇರಬೇಕು.
  • ನಿಮ್ಮ ಬಲಗೈ ಕಡೆಗೆ ನೀವು ನೋಡಿಕೊಂಡು 2 ರಿಂದ 3 ಬಾರಿ ದೀರ್ಘವಾಗಿ ಉಸಿರಾಟ ನಡೆಸಬೇಕು. ನಿಮ್ಮ ಇನ್ನೊಂದು ದೇಹದ ಬದಿಗೂ ಕೂಡ ಇದನ್ನು ರಿಪೀಟ್ ಮಾಡಿ.

ಪಶ್ಚಿಮೊತ್ತನಸನ

  • ಯೋಗ ಮಾಡುವ ಚಾಪೆಯ ಮೇಲೆ ಮೊದಲು ಆರಾಮವಾಗಿ ಕುಳಿತುಕೊಳ್ಳಬೇಕು. ಕಾಲುಗಳನ್ನು ನಿಮ್ಮ ಮುಂದಕ್ಕೆ ಚಾಚಬೇಕು. ನಿಮ್ಮ ಎರಡು ಕೈಗಳನ್ನು ಅಕ್ಕಪಕ್ಕದಲ್ಲಿ ಇಟ್ಟುಕೊಳ್ಳಬೇಕು
  • ನಿಮ್ಮ ಎರಡು ಕೈಗಳನ್ನು ತಲೆಯ ಮೇಲೆತ್ತಿ, ನಿಮ್ಮ ಕೈಬೆರಳುಗಳು ತಾರಸಿ ಕಡೆಗೆ ಮುಖ ಮಾಡಿ ರಬೇಕು
  • ದೀರ್ಘವಾಗಿ ಉಸಿರನ್ನು ಒಳಗೆ ತೆಗೆದುಕೊಂಡು ನಿಮ್ಮ ಬೆನ್ನುಹುರಿಯನ್ನು ನೇರವಾಗಿ ಇರಿಸಿ ಕೊಳ್ಳಬೇಕು
  • ಈಗ ಉಸಿರನ್ನು ಹೊರ ಬಿಡುವ ಸಂದರ್ಭದಲ್ಲಿ ನಿಮ್ಮ ಎರಡು ಕೈಗಳ ಬೆರಳುಗಳಿಂದ ನಿಮ್ಮ ಕಾಲಿನ ಹೆಬ್ಬೆರಳುಗಳನ್ನು ಮುಟ್ಟಬೇಕು
  • ನಿಮ್ಮ ಸೊಂಟದ ಭಾಗ ಈ ಸಂದರ್ಭದಲ್ಲಿ ನಿಮ್ಮ ತೊಡೆಗಳ ಮೇಲೆ ರೆಸ್ಟ್ ಮಾಡಿರಬೇಕು ಮತ್ತು ನಿಮ್ಮ ಮೂಗು ನಿಮ್ಮ ಮಂಡಿಗಳ ಮಧ್ಯೆ ಇರಬೇಕು. ಕೆಲವು ಸೆಕೆಂಡುಗಳು ಹೀಗೆ ಇದ್ದು, ಆನಂತರ ಮತ್ತೆ ಇದನ್ನು ಪ್ರಾರಂಭಿಸಿ.

ಗೋಮುಖಾಸನ

  • ಮೊದಲಿಗೆ ಮಂಡಿಗಳನ್ನು ಮಡಚಿ ಆರಾಮವಾಗಿ ನೆಲದ ಮೇಲೆ ಮೊದಲು ಕುಳಿತುಕೊಳ್ಳಬೇಕು.
  • ಈಗ ನಿಮ್ಮ ಬಲಗಡೆಯ ಮಂಡಿಯನ್ನು ನಿಮ್ಮ ಎಡಗಡೆಯ ಮಂಡಿಯ ಕಡೆಗೆ ಇರಿಸಿಕೊಳ್ಳಬೇಕು. ನಿಮ್ಮ ಕಾಲುಗಳು ಸಾಧ್ಯವಾದಷ್ಟು ನಿಮ್ಮ ಸೊಂಟದ ಕಡೆಗೆ ಇರಬೇಕು.
  • ಈಗ ನಿಮ್ಮ ಎಡಗೈ ತೆಗೆದುಕೊಂಡು ಹಿಂಬದಿಗೆ ಇರಿಸಿ ನಿಮ್ಮ ಮೊಣಕೈಯನ್ನು ಬಾಗಿಸಿ. ಈಗ ನಿಮ್ಮ ಕೈಗಳನ್ನು ಮೇಲೆತ್ತಿ ಭುಜದ ಕಡೆಗೆ ಇಟ್ಟುಕೊಳ್ಳಿ.
  • ಈಗ ನಿಮ್ಮ ಬಲಗೈಯನ್ನು ತಲೆಯ ಮೇಲೆ ಎತ್ತಿ, ಮೊಣಕೈಯನ್ನು ಮಡಚಿ, ಎರಡು ಕೈಗಳ ಬೆರಳುಗಳನ್ನು ಒಟ್ಟಿಗೆ ಸೇರಿಸಿ ಲಾಕ್ ಮಾಡಿ. ಕನಿಷ್ಠ ಮೂವತ್ತು ಸೆಕೆಂಡುಗಳ ಕಾಲ ಹೀಗೆ ಇದ್ದು, ಆನಂತರ ಮತ್ತೆ ಇದೇ ಭಂಗಿಯನ್ನು ರಿಪೀಟ್ ಮಾಡಿ.