ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದನೆ ಅಥವಾ ದೇಶದ್ರೋಹದಂತಹ ಘೋರ ಅಪರಾಧ ಎದುರಿಸುತ್ತಿರುವ ವಿಚಾರಣಾಧೀನ ಕೈದಿಗಳು ಇಲ್ಲವೇ ಅಪರಾಧಿಗಳು ಜೈಲಿನಲ್ಲಿ ದೂರವಾಣಿ ಸೌಲಭ್ಯ ಪಡೆಯುವಂತಿಲ್ಲ ಎಂದು ಮಹಾರಾಷ್ಟ್ರ ಜೈಲು ಪ್ರಾಧಿಕಾರ ಬಾಂಬೆ ಹೈಕೋರ್ಟ್‌ಗೆ ಬುಧವಾರ ತಿಳಿಸಿದೆ.
ಆದಾಗ್ಯೂ, ತಮ್ಮ ಕುಟುಂಬ ಮತ್ತು ಸಂಬಂಧಿಕರನ್ನು ಭೇಟಿ ಮಾಡಲು ಮತ್ತು ಪತ್ರ ವ್ಯವಹಾರ ನಡೆಸಲು ಅಂತಹ ಕೈದಿಗಳಿಗೆ ಅವಕಾಶ ಇದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಸಂಗೀತಾ ಶಿಂಧೆ ನ್ಯಾಯಾಲಯಕ್ಕೆ ತಿಳಿಸಿದರು.
ಪರಿಣಾಮ ಭೀಮಾ ಕೋರೆಗಾಂವ್ ಹಿಂಸಾಚಾರದಲ್ಲಿನ ತಮ್ಮ ಪಾತ್ರಕ್ಕಾಗಿ ಯುಎಪಿಎ ಅಡಿಯಲ್ಲಿ ಪ್ರಕರಣ ಎದುರಿಸುತ್ತಿರುವ ಸಾಮಾಜಿಕ ಹೋರಾಟಗಾರ ಗೌತಮ್ ನವಲಖಾ ಅವರು ಜೈಲಿನಿಂದ ಫೋನ್ ಮಾಡಲು ಅನುಮತಿ ನೀಡಲಾಗದು ಎಂದು ಪ್ರಾಧಿಕಾರ ಹೇಳಿದೆ. ದೂರವಾಣಿ ಸಂವಹನಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ನವಲಾಖಾ ಅವರು ಸಲ್ಲಿಸಿದ ಮೇಲ್ಮನವಿಗೆ ಸಂಬಂಧಿಸಿದಂತೆ ಅದು ಈ ಸಮಜಾಯಿಷಿ ನೀಡಿದೆ.
ದೂರವಾಣಿ ಸೌಲಭ್ಯ ತಿರಸ್ಕರಿಸಿದ್ದ ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ನವಲಖಾ ಹೈಕೋರ್ಟ್ ಕದ ತಟ್ಟಿದ್ದರು. ಕೋವಿಡ್ ಸಂದರ್ಭದಲ್ಲಿ ನೀಡಲಾಗಿದ್ದ ದೂರವಾಣಿ ಸೌಲಭ್ಯವನ್ನು ಮುಂದುವರೆಸಬೇಕು ಎಂದು ಅವರ ಪರ ವಕೀಲ ಯುಗ್ ಮೋಹಿತ್ ಚೌಧರಿ ವಾದಿಸಿದ್ದರು.