ಮೈಸೂರು : ಮೋಸದಿಂದ ಐಷಾರಾಮಿ ಕಾರುಗಳನ್ನು ಖರೀದಿಸಿ ವಂಚಿಸುತ್ತಿದ್ದ ಮೂವರು ವಂಚಕರನ್ನು ಮೈಸೂರು ಜಿಲ್ಲಾ ಪೊಲೀಸರು ಬಂಧಿಸಿ 1.10 ಕೋಟಿ ರೂ. ಬೆಲೆ ಬಾಳುವ 8 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಹಣ್ಣಿನ ವ್ಯಾಪಾರಿ ರುಮಾನ್ ಷರೀಫ್ (26), ಕಾರ್ ಡೀಲರ್ ಮುಜಾಹಿದ್ ಪಾಷಾ (37), ಕಾರ್ ಮೆಕಾನಿಕ್ ಷಾಹಾಬುದ್ದೀನ್ (25) ಬಂಧಿತ ಆರೋಪಿಗಳು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ, ಐಷಾರಾಮಿ ಕಾರುಗಳನ್ನು ಖರೀದಿ ಮಾಡುವುದಾಗಿ ವಂಚಿಸಿ ಅದೇ ಕಾರನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಲಾಗಿ ಮೂವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಂಧಿತರಿಂದ ಆಡಿ.ಎ5, ಫೋಲೋ 1.2, ಚವರ್ ಲೆಟ್ ಕಜ್9, ಫೋರ್ಡ್ ಎಕೋ ಸ್ಪೋರ್ಟ್ಸ್ , ಹ್ಯುಂಡಾಯ್ ಐ20, ಆಡಿ ಎಜಿ ಎ.4, ವೋಲ್ಕಾಸ್ ವ್ಯಾಗನ್ ವೆಂಟೊ, ವೋಲ್ಕಾಸ್ ವ್ಯಾಗನ್ ಪೋಲೋ ಸೇರಿದಂತೆ 8 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ
ಮೈಸೂರು ನಗರದ ಉದ್ಯಮಿ ಸಿ.ಎಸ್.ಅಭಿಷೇಕ್ ಎಂಬವರ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಕಾರನ್ನು ಖರೀದಿಸಿ ವಂಚಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.ಅಪರ ಪೊಲೀಸ್ ಅಧೀಕ್ಷಕ ಎಲ್.ನಾಗೇಶ್ ಅವರ ನೇತೃತ್ವದಲ್ಲಿ ಡಿವೈಎಸ್ಪಿ ರಘು ಜಿ.ಎಸ್ , ಇನ್‌ಸ್ಪೆಕ್ಟರ್ ಸತೀಶ್, ಪಿಎಸ್‌ಐ ಸುದರ್ಶನ್, ಎಎಸ್‌ಐ ಸತೀಶ್, ಹೆಡ್‌ಕಾನ್‌ಸ್ಟೇಬಲ್‌ಗಳಾದ ಅಬ್ದುಲ್ ಲತೀಫ್, ಎನ್.ಎ.ಅಶೋಕ, ಭಾಸ್ಕರ್ ಈ ಜಾಲ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಅಡಿಷನಲ್ ಎಸ್ಪಿಗಳಾದ ಎನ್.ಮಲ್ಲಿಕ್, ಎಲ್.ನಾಗೇಶ್ ಉಪಸ್ಥಿತರಿದ್ದರು.















