ಮನೆ ರಾಷ್ಟ್ರೀಯ ಒತ್ತಾಯಪೂರ್ವಕವಾಗಿ ಮೂರು ಕ್ರಿಮಿನಲ್ ಕಾನೂನುಗಳನ್ನು ಅಂಗೀಕರಿಸಲಾಗಿದೆ: ಮಲ್ಲಿಕಾರ್ಜುನ ಖರ್ಗೆ ಟೀಕೆ

ಒತ್ತಾಯಪೂರ್ವಕವಾಗಿ ಮೂರು ಕ್ರಿಮಿನಲ್ ಕಾನೂನುಗಳನ್ನು ಅಂಗೀಕರಿಸಲಾಗಿದೆ: ಮಲ್ಲಿಕಾರ್ಜುನ ಖರ್ಗೆ ಟೀಕೆ

0

ನವದೆಹಲಿ: ದೇಶದ ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ ತರುವ ಹೊಸ ಮೂರು ಕ್ರಿಮಿನಲ್‌ ಅಪರಾಧ ಕಾನೂನುಗಳು ಇಂದಿನಿಂದ ಜಾರಿಗೆ ಬಂದಿವೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಳೆದ ಲೋಕಸಭೆಯಲ್ಲಿ 146 ಸಂಸದರನ್ನು ಅಮಾನತು ಮಾಡುವ ಮೂಲಕ ಒತ್ತಾಯಪೂರ್ವಕವಾಗಿ ಈ ಮೂರು ಕ್ರಿಮಿನಲ್ ಕಾನೂನುಗಳನ್ನು ಅಂಗೀಕರಿಸಲಾಗಿದೆ. ದೇಶದಲ್ಲಿ ಸಂಸದೀಯ ವ್ಯವಸ್ಥೆಯನ್ನು ನಾಶಪಡಿಸುವ ‘ಬುಲ್ಡೋಜರ್ ನ್ಯಾಯ’ ಎಂದು ಟೀಕಿಸಿದ್ದಾರೆ.

Join Our Whatsapp Group

ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 ಹೊಸದಾಗಿ ಅನುಷ್ಠಾನಗೊಂಡಿರುವ ಕಾಯ್ದೆಗಳಾಗಿವೆ. 163 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ದಂಡ ಸಂಹಿತೆ, 126 ವರ್ಷಗಳ ಹಿಂದಿನ ಅಪರಾಧ ದಂಡಪ್ರಕ್ರಿಯಾ ಸಂಹಿತೆ ಮತ್ತು 151 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಈ ಮೂರು ಕಾನೂನುಗಳು ಜಾರಿಗೆ ಬಂದಿವೆ.

ಸಮಾಜದ ವಾಸ್ತವಾಂಶ ಮತ್ತು ಅಪರಾಧಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಕಾರ್ಯವಿಧಾನವನ್ನು ಹೊಸ ಕಾನೂನುಗಳ ಮೂಲಕ ಒದಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತಂತೆ ಹಿಂದಿ ಭಾಷೆಯಲ್ಲಿ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ‘ಚುನಾವಣೆಯಲ್ಲಿ ರಾಜಕೀಯ ಮತ್ತು ನೈತಿಕ ಆಘಾತ ಅನುಭವಿಸಿದ ಬಳಿಕ ಮೋದಿ ಜೀ ಮತ್ತು ಬಿಜೆಪಿ ಸಂವಿಧಾನವನ್ನು ಗೌರವಿಸುವ ರೀತಿ ನಾಟಕ ಮಾಡುತ್ತಿದ್ದಾರೆ. ಸತ್ಯವೇನೆಂದರೆ, ಇಂದು ಜಾರಿಗೆ ಬರುತ್ತಿರುವ ಮೂರು ಕ್ರಿಮಿನಲ್‌ ಅಪರಾಧ ಕಾನೂನುಗಳು ಲೋಕಸಭೆಯಲ್ಲಿ 146 ಸಂಸದರನ್ನು ಅಮಾನತು ಮಾಡಿ ಒತ್ತಾಯಪೂರ್ವಕವಾಗಿ ಜಾರಿಗೆ ತಂದವುಗಳಾಗಿವೆ ಎಂದು ಹೇಳಿದ್ದಾರೆ.

ಸಂಸದೀಯ ವ್ಯವಸ್ಥೆಯಲ್ಲಿ ಈ ‘ಬುಲ್ಡೋಜರ್ ನ್ಯಾಯ’ ಮೇಲುಗೈ ಸಾಧಿಸಲು ‘ಇಂಡಿಯಾ’ ಬಣ ಬಿಡುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಹೊಸ ಕಾನೂನುಗಳು ಶೀಘ್ರ ನ್ಯಾಯ ಒದಗಿಸಲು ಆದ್ಯತೆ ನೀಡುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಸೋಮವಾರದಿಂದ, ಎಲ್ಲ ಹೊಸ ಎಫ್‌ಐಆರ್‌ಗಳನ್ನು ಬಿಎನ್‌ಎಸ್ ಅಡಿಯಲ್ಲಿ ದಾಖಲಿಸಲಾಗುತ್ತದೆ. ಈ ಹಿಂದೆ ದಾಖಲಾದ ಪ್ರಕರಣಗಳನ್ನು ಹಳೆಯ ಕಾನೂನುಗಳ ಅಡಿಯಲ್ಲಿ ವಿಚಾರಣೆಯನ್ನು ಮುಂದುವರಿಸಲಾಗುತ್ತದೆ ಎಂದಿದ್ದಾರೆ.