ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಪಡಿತರ ಚೀಟಿದಾರರ ಹೆಸರು ಸೇರ್ಪಡೆ ಸೇರಿದಂತೆ ಅಗತ್ಯ ತಿದ್ದುಪಡಿಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೂರು ದಿನಗಳ ಕಾಲ ಅವಕಾಶ ನೀಡಿದೆ.
ಅದರಂತೆ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ, ಕಾರ್ಡ್ ಗಳಿಗೆ ಹೊಸ ಹೆಸರು ಸೇರ್ಪಡೆ, ಹೆಸರುಗಳ ಅಕ್ಷರಗಳು, ವಿಳಾಸ ಪರಿಷ್ಕರಣೆ ಸೇರಿದಂತೆ ಯಾವುದೇ ರೀತಿಯ ತಿದ್ದುಪಡಿಗಳಿದ್ದರೂ ಮಾಡಿಸಿಕೊಳ್ಳಬಹುದಾಗಿದೆ. ಹಾಲಿ ಇರುವ ಪಡಿತರ ಚೀಟಿಯಲ್ಲಿನ ಹೆಸರು ರದ್ದುಪಡಿಸುವುದು, ಕುಟುಂಬದ ಹೊಸ ಸದಸ್ಯರ ಹೆಸರು ಸೇರಿಸುವುದಕ್ಕೆ ಅವಕಾಶ ಒದಗಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದ್ದು, ಮೊದಲ ಹಂತ ಮುಗಿಯುತ್ತಿದ್ದಂತೆ ಎರಡನೇ ಹಂತದಲ್ಲಿ ಬೆಳಗಾವಿ, ಬಾಗಲಕೋಟೆ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಹಾಸನ, ಗದಗ, ಹಾವೇರಿ, ಕೊಡಗು, ಮೈಸೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ ಜಿಲ್ಲೆಗಳಲ್ಲಿ ಅವಕಾಶ ನೀಡಲಾಗುತ್ತದೆ. ನಂತರ ಉಳಿದ ಜಿಲ್ಲೆಗಳಲ್ಲಿಯೂ ಮೂರನೇ ಹಂತದಲ್ಲಿ ಹೆಸರುಗಳ ಪರಿಷ್ಕರಣೆ ಮಾಡಬಹುದಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆದರೆ ಇದು ಕೇವಲ ಪರಿಷ್ಕರಣೆ ಮಾಡಲು ಮಾತ್ರ ಸೀಮಿತವಾಗಿದ್ದು, ಈಗಾಗಲೇ ಹೊಸದಾದ ಬಿಪಿಎಲ್ ಕಾರ್ಡ್ ಕೋರಿ ಸಲ್ಲಿಸಿರುವ ಅರ್ಜಿಗಳ ವಿಲೇವಾರಿ ಮತ್ತು ಹೊಸ ಅರ್ಜಿಗಳ ಸಲ್ಲಿಕೆಗೆ ಸಂಬಂಧಿಸಿದ್ದಲ್ಲ ಎಂದು ಆಹಾರ ಇಲಾಖೆ ಸ್ಪಷ್ಟಪಡಿಸಿದೆ. ಹಾಗಾಗಿ, ಹಾಲಿ ಇರುವ ಕಾರ್ಡುಗಳ ಪರಿಷ್ಕರಣೆ ಮಾತ್ರ ಮಾಡಿಕೊಳ್ಳಬಹುದಾಗಿದೆ.
ಬಿಪಿಎಲ್ ಕಾರ್ಡ್‌ನಲ್ಲಿ ಹೆಸರು ಬದಲಾವಣೆ, ಆಧಾರ್ ಕಾರ್ಡ್ ನಲ್ಲಿರುವ ಹೆಸರು ಸೇರ್ಪಡೆ, ಹೊಸ ಸದಸ್ಯರು ಸೇರಿಸುವುದು, ಯಾರಾದರೂ ಮೃತಪಟ್ಟರೆ ಅಂಥವರ ಹೆಸರು ಡಿಲೀಟ್, ಬೇರೆ ಜಿಲ್ಲೆಗೆ ವರ್ಗಾವಣೆ ಹಾಗೂ ವಿಳಾಸ ಪರಿಷ್ಕರಣೆ ಮಾಡಲು ಆಹಾರ ಇಲಾಖೆ ಅವಕಾಶ ಕೊಟ್ಟಿದೆ. ಸೇವಾ ಕೇಂದ್ರ, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಸೇರಿ ಇತರ ಕಡೆಗಳಲ್ಲಿ ರೇಷನ್ ಕಾರ್ಡ್ ಮಾರ್ಪಾಡು, ತಿದ್ದುಪಡಿ ಮಾಡಿಸಿಕೊಳ್ಳಲು ಸೂಚಿಸಿತ್ತು. ಆದರೆ, ಪರಿಷ್ಕರಣೆಗೆ ಬೇಡಿಕೆ ಕಡಿಮೆಯಾಗದ ಹಿನ್ನೆಲೆಯಲ್ಲಿ ಮತ್ತೆ ಅವಕಾಶ ನೀಡಿ ಆದೇಶ ಹೊರಡಿಸಿದೆ.