ಮಂಡ್ಯ: ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಬೆಚ್ಚಿ ಬೀಳುವ ಘಟನೆ ಮಂಡ್ಯ ತಾಲೂಕಿನ ಚಂದಗಾಲು ಬಳಿ ಸೋಮವಾರ ನಡೆದಿದೆ.
ಶ್ರೀರಂಗಪಟ್ಟಣದ ಗಂಜಾನ ಮಾಸ್ತಪ್ಪ (65 ), ರತ್ನಮ್ಮ (45 ), ಪುತ್ರಿ ಲಕ್ಷ್ಮಿ (18 )ಆತ್ಮಹತ್ಯೆ ಮಾಡಿಕೊಂಡವರು.
ಗಂಜಾಂ ನಿವಾಸಿ ಮಾಸ್ತಪ್ಪ ಎಂಬುವವರು ತುಂಬಾ ಬಡವರಾಗಿದ್ದು, ಜೀವನಕ್ಕಾಗಿ ಆಟೋ ಓಡಿಸುತ್ತಿದ್ದರು. ತಮ್ಮ ಕುಟುಂಬ ನಿರ್ವಹಣೆಗಾಗಿ 3 ಲಕ್ಷ ರೂ.ಕೈ ಸಾಲ ಮಾಡಿಕೊಂಡಿದ್ದರು.
ಸಾಲ ಕೊಟ್ಟವರು ಮನೆ ಬಳಿ ಬಂದು ಗಲಾಟೆ ಮಾಡಿದ ಹಿನ್ನಲೆಯಲ್ಲಿ ಮರ್ಯಾದೆಗೆ ಅಂಜಿ ಕುಟುಂಬ ಸಮೇತ ಶ್ರೀರಂಗಪಟ್ಟಣದ ಗಂಜಾಂನಿಂದ ಮಂಡ್ಯ ತಾಲೂಕಿನ ಚಂದಗಾಲು ಬಳಿ ಬಂದು ವಿಷ ಕುಡಿದು, ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ನಾಲೆ ಏರಿ ಮೇಲೆ ಆಟೋ ನಿಲ್ಲಿಸಿ, ವಿಷ ಕುಡಿದು ನಂತರ ನಾಲೆಗೆ ಹಾರಿದ್ದಾರೆ.
ಮಾಸ್ತಪ್ಪ, ರತ್ನಮ್ಮ ದಂಪತಿಯ ಮೃತದೇಹ ಪತ್ತೆಯಾಗಿದೆ. ಯಲಿಯೂರು-ಸುಂಡಹಳ್ಳಿ ನಡುವೆ ಎರಡು ಮೃತದೇಹಗಳ ಪತ್ತೆಯಾಗಿದ್ದು, ಮತ್ತೊಂದು ಶವಕ್ಕಾಗಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಯುತ್ತಿದೆ.
ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.














