ತುಮಕೂರು: ಮಧುಗಿರಿ ತಾಲೂಕಿನ ಬುಳಸಂದ್ರ ಗ್ರಾಮದಲ್ಲಿ ವಾಂತಿ ಭೇದಿಯಿಂದ ಮೂವರು ಮೃತಪಟ್ಟಿದ್ದು, 11ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿದ್ದಾರೆ.
ಗ್ರಾಮದ ತಿಪ್ಪಮ್ಮ (40), ತಿಮ್ಮಕ್ಕ (85) ಗಿರಿಯಮ್ಮ (75) ಮೃತ ದುರ್ದೈವಿಗಳು. ಶ್ರಾವಣ ಮಾಸ ಹಿನ್ನೆಲೆಯಲ್ಲಿ ಕಳೆದ ಶನಿವಾರ ಗ್ರಾಮದಲ್ಲಿ ದೇವರ ಉತ್ಸವ ಆಯೋಜಿಸಲಾಗಿತ್ತು. ಮುತ್ತರಾಯಸ್ವಾಮಿ, ಕರಿಯಮ್ಮ, ಭೂತಪ್ಪ ದೇವರ ಆರತಿ ಉತ್ಸವ ನಡೆದಿತ್ತು. ಉತ್ಸವದ ವೇಳೆ ಗ್ರಾಮಸ್ಥರು ಪ್ರಸಾದ ಸೇವಿಸಿದ್ದರು.
ಪ್ರಸಾದ ಸೇವಿದ್ದರಿಂದ 11 ಜನರು ವಾಂತಿ, ಭೇದಿಯಿಂದ ಅಸ್ವಸ್ಥರಾಗಿದ್ದು, ಮೂವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ.
ಅಸ್ವಸ್ಥರಿಗೆ ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಾಥಮಿಕ ಚಿಕಿತ್ಸೆ ನೀಡುತ್ತಿದ್ದಾರೆ. ಮೇಲ್ನೋಟಕ್ಕೆ ಪ್ರಸಾದ ಸೇವಿಸಿದ್ದರಿಂದ ದುರ್ಘಟನೆ ಸಂಭವಿಸಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮಕ್ಕೆ ತಹಶಿಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.