ಬೆಂಗಳೂರು: ಅಕ್ಕಿ ಕೊಡಲು ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸಗಡ ಸರ್ಕಾರ ಮುಂದೆ ಬಂದಿವೆ. ಒಂದು ವಾರದಲ್ಲಿ ಅಕ್ಕಿ ಖರೀದಿ ಪೈನಲ್ ಆಗಲಿದೆ ಎಂದು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದರು.
ಈ ಕುರಿತು ಮಾತನಾಡಿದ ಅವರು, ಸದ್ಯ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಬೆಲೆ ನಿಗದಿ ವಿಚಾರವಾಗಿ ಮಾತುಕತೆ ನಡೆಯುತ್ತಿದೆ. ಆದಷ್ಟು ಬೇಗ ಹತ್ತು ಕೆಜಿ ಅಕ್ಕಿ ಕೋಡುವ ಕೆಲಸ ಮಾಡುತ್ತೇವೆ. ಬರ ಪೀಡಿತ ತಾಲೂಕುಗಳಿಗೆ ಹಣದ ಬದಲು ಅಕ್ಕಿ ನೀಡಲಾಗುವುದು ಎಂದು ಸಚಿವ ಮುನಿಯಪ್ಪ ಹೇಳಿದರು.
114 ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಇದೆ. ಈ ತಾಲೂಕುಗಳಿಗೆ 10 ಕೆಜಿ ಅಕ್ಕಿ ವಿತರಣೆಗೆ ಸಿದ್ಧತೆ ನಡೆಸಲಾಗುತ್ತಿದೆ. ಅಲ್ಲದೆ, ಈ ಎಲ್ಲಾ ತಾಲೂಕುಗಳಲ್ಲಿ ಬರ ಘೋಷಣೆಗೆ ಸಿದ್ಧತೆ ನಡೆಸಲಾಗಿದೆ ಎಂದರು.
ಡಿಬಿಟಿ ವಿಚಾರದಲ್ಲಿ ಮಾಧ್ಯಮಗಳಿಗೆ ತಪ್ಪು ಮಾಹಿತಿ ಹೋಗಿದೆ. ಜುಲೈ 97 ಲಕ್ಷ ಕಾರ್ಡ್ಗೆ ಡಿಬಿಟಿ ಮಾಡಿದ್ದೇವೆ. 2.45 ಕೋಟಿ ಜನರಿಗೆ 566 ಕೋಟಿ, ಆಗಸ್ಟ್ ತಿಂಗಳಲ್ಲಿ 3.69 ಕೋಟಿ ಜನರಿಗೆ 606 ಕೋಟಿ ಹಣ ಬಿಡುಗಡೆ ಆಗಿದೆ. ಬ್ಯಾಂಕ್ ಅಕೌಂಟ್ ಇಲ್ಲದ 5 ಲಕ್ಷ ಕಾರ್ಡ್ ದಾರರು ಇದ್ದಾರೆ. ಬ್ಯಾಂಕ್ ಅಕೌಂಟ್ ಇಲ್ಲದವರು 21 ಲಕ್ಷ ಜನರಿದ್ದಾರೆ. 2 ಲಕ್ಷ ಜನರಿಗೆ ನಾವೇ ಬ್ಯಾಂಕ್ ಅಕೌಂಟ್ ಮಾಡಿದ್ದೇವೆ. 14 ಲಕ್ಷ ಜನರಿಗೆ ನಾವೇ ಅಕೌಂಟ್ ಮಾಡುತ್ತಿದ್ದೇವೆ. ಇದರಿಂದ ಯಾರಿಗೂ ಕೂಡ ಅನ್ಯಾಯ ಆಗುವುದಿಲ್ಲ ಎಂದರು.
ಉಚಿತ ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟೀಕೆ ವಿಚಾರವಾಗಿ ಮಾತನಾಡಿದ ಸಚಿವ ಮುನಿಯಪ್ಪ, ದೇಶದಲ್ಲಿ ಶೇ. 35-37 ರಷ್ಟು ಬಡತನ ರೇಖೆಗಿಂತ ಕೆಳಗಿನ ಜನರಿದ್ದಾರೆ. ಯುಪಿಎ ಇದ್ದಾಗ ಆಹಾರ ಭದ್ರತಾ ಕಾಯ್ದೆ ತರಲಾಗಿತ್ತು. ಯಾರೂ ಕೂಡ ಕೆಲಸ ಇಲ್ಲದೆ ಮಲಗಬಾರದು ಅಂತ ನರೇಗಾ ಯೋಜನೆ ತಂದಿದ್ದೆವು. ಈ ಆಹಾರ ಭದ್ರತಾ ಕಾಯ್ದೆಯಿಂದ ಜನರಿಗೆ ಅನುಕೂಲ ಆಗುತ್ತಿದೆ ಎಂದರು.