ಮಡಿಕೇರಿ(Madikeri): ಮಡಿಕೇರಿ ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪ 10 ಕಿ.ಮೀ ವ್ಯಾಪ್ತಿಯಲ್ಲಿ ಹುಲಿಯ ಚಲನವಲನಗಳು ಕಂಡು ಬಂದಿದ್ದು, ಘಟ್ಟದಳ ಸಮೀಪದ ಟಾಟಾ ಸಂಸ್ಥೆಯ ಮಾರ್ಗೊಲ್ಲಿ ಎಸ್ಟೇಟ್ ನ ಸಿಸಿಟಿವಿ ಕ್ಯಾಮೆರಾದಲ್ಲಿ ಹುಲಿ ಚಿತ್ರ ಸೆರೆಯಾಗಿದೆ
ಘಟ್ಟದಳ ಸಮೀಪದ ಟಾಟಾ ಸಂಸ್ಥೆಯ ಮಾರ್ಗೊಲ್ಲಿ ಎಸ್ಟೇಟ್ ಹಾಗೂ ಪಾಲಿಬೆಟ್ಟ ದ ದುಬಾರಿ ಎಸ್ಟೇಟ್ ನಲ್ಲಿ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಎರಡೂ ಕಡೆಯೂ ಒಂದೊಂದು ಹಸುವನ್ನು ಕೊಂದಿದೆ.
ಎರಡೂ ಕಡೆಯೂ ಒಂದೇ ಹುಲಿ ದಾಳಿ ನಡೆಸಿದೆಯೆ ಅಥವಾ ಎರಡೂ ಬೇರೆ ಬೇರೆಯೆ ಎಂಬುದು ಗೊತ್ತಾಗಿಲ್ಲ. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಕೆಲ ದಿನಗಳ ಹಿಂದೆ ಎಸ್ಟೇಟ್ ನಲ್ಲಿ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. ಸಂಸ್ಥೆಯ ವತಿಯಿಂದ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿತ್ತು. ಎಸ್ಟೇಟ್ ನ ತೋಟದ ಒಳಭಾಗದಲ್ಲಿ ಹಸುವೊಂದನ್ನು ಹುಲಿ ಬೇಟೆಯಾಡಿ ಕೊಂದಿದ್ದು, ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.
ದಷ್ಟಪುಷ್ಟವಾದ ಹುಲಿಯಾಗಿದ್ದು, 8 ವರ್ಷ ವಯಸ್ಸು ಇರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್, ಉಪವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, ಕೂಂಬಿಂಗ್ ಆರಂಭಿಸುವುದಾಗಿ ತಿಳಿಸಿದ್ದಾರೆ.
ಪಾಲಿಬೆಟ್ಟದಲ್ಲೂ ಆತಂಕ: ಬುಧವಾರ ರಾತ್ರಿ ಪಾಲಿಬೆಟ್ಟ ದ ದುಬಾರಿ ಎಸ್ಟೇಟ್ ನಲ್ಲಿ ಹುಲಿ ದಾಳಿ ನಡೆಸಿ ಹಸುವೊಂದನ್ನು ಕೊಂದು ಹಾಕಿತ್ತು. ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಕ್ಯಾಮೆರಾ ಅಳವಡಿಸಿದೆ. ಶುಕ್ರವಾರ ಕ್ಯಾಮೆರಾದಲ್ಲಿ ಹುಲಿ ದೃಶ್ಯ ಸೆರೆಯಾಗಿಲ್ಲ. ಹುಲಿ ಇದೆ ಎಂಬ ಕಾರಣ ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.