ಮನೆ ರಾಷ್ಟ್ರೀಯ ಹುಲಿ ಸೆರೆ ಕಾರ್ಯಾಚರಣೆ: ವಯನಾಡ್‌ನ ಮಾನಂದವಾಡಿಯಲ್ಲಿ ಕರ್ಫ್ಯೂ ವಿಧಿಸಿದ ಕೇರಳ ಸರ್ಕಾರ

ಹುಲಿ ಸೆರೆ ಕಾರ್ಯಾಚರಣೆ: ವಯನಾಡ್‌ನ ಮಾನಂದವಾಡಿಯಲ್ಲಿ ಕರ್ಫ್ಯೂ ವಿಧಿಸಿದ ಕೇರಳ ಸರ್ಕಾರ

0
ಸಾಂದರ್ಭಿಕ ಚಿತ್ರ

ತಿರುವನಂತಪುರ: ಕೇರಳದ ವಯನಾಡ್‌ನ ಮಾನಂದವಾಡಿಯಲ್ಲಿ ಹುಲಿ ಸೆರೆ ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವ ಕೇರಳ ಸರ್ಕಾರ ಕರ್ಫ್ಯೂ ವಿಧಿಸಿದೆ ಎಂದು ವರದಿಯಾಗಿದೆ. ವಿಭಾಗ–1 (ಪಂಚರಕೊಲ್ಲಿ), ವಿಭಾಗ–2 (ಪಿಲಕಾವು), ಮತ್ತು ಡಿವಿಷನ್–36ರ (ಚಿರಕ್ಕರ) ವ್ಯಾಪ್ತಿಯಲ್ಲಿ ಇಂದು (ಸೋಮವಾರ) ಬೆಳಿಗ್ಗೆ 6ರಿಂದ ಮುಂದಿನ 48 ಗಂಟೆಗಳವರೆಗೆ ಕರ್ಫ್ಯೂ ಅನ್ವಯಿಸುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಈ ಪ್ರದೇಶಗಳಲ್ಲಿ ಶಾಲಾ–ಕಾಲೇಜುಗಳು, ಅಂಗನವಾಡಿಗಳು, ಮದರಸಾಗಳು ಮತ್ತು ಟ್ಯೂಷನ್ ಸೆಂಟರ್‌ಗಳು ಮುಚ್ಚಲ್ಪಟ್ಟಿರುತ್ತವೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

Join Our Whatsapp Group

ವಯನಾಡ್‌ನ ಮಾನಂದವಾಡಿಯಲ್ಲಿ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರ ಮೇಲೆ ಹುಲಿ ಶುಕ್ರವಾರ ದಾಳಿ ನಡೆಸಿತ್ತು. ಇದರಿಂದಾಗಿ ಭೀತಿ ಇನ್ನಷ್ಟು ಹೆಚ್ಚಿದೆ.

ಸಿಬ್ಬಂದಿ ಮೇಲೆ ದಾಳಿ ಹಿನ್ನೆಲೆಯಲ್ಲಿ ಹುಲಿಯನ್ನು ‘ನರಭಕ್ಷಕ’ ಎಂದು ಕೇರಳ ಸರ್ಕಾರ ಘೋಷಿಸಿದ್ದು, ಹುಲಿಯ ಬೇಟೆಗೆ ಆದೇಶಿಸಿದೆ. ವಯನಾಡ್‌ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಉನ್ನತ ಮಟ್ಟ ಸಭೆ ಬಳಿಕ ಅರಣ್ಯ ಸಚಿವ ಎ.ಕೆ.ಸಸೀಂದ್ರನ್ ಈ ವಿಷಯ ತಿಳಿಸಿದ್ದಾರೆ.

ಇಲಾಖೆಯ ಕ್ಷಿಪ್ರ ಕಾರ್ಯಪಡೆಯ (ಆರ್‌ಆರ್‌ಟಿ) ಸದಸ್ಯ, 28 ವರ್ಷದ ಜಯಸೂರ್ಯ ಅವರ ಕೈಗೆ ಹುಲಿ ದಾಳಿಯಿಂದ ಗಾಯವಾಗಿದೆ. ಕೂದಲೆಳೆ ಅಂತರದಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಿಂಬದಿಯಿಂದ  ಹುಲಿ ದಾಳಿ ನಡೆಸಿದ್ದು, ಜಾಗೃತರಾದ ಜಯಸೂರ್ಯ ತಮ್ಮಲ್ಲಿದ್ದ ರಕ್ಷಣಾ ಕವಚ ಅಡ್ಡಹಿಡಿದು ತಪ್ಪಿಸಿಕೊಂಡಿದ್ದಾರೆ. ಈ ಗೊಂದಲದಲ್ಲಿ ಕೈಗೆ ಗಾಯವಾಗಿದೆ. ಹುಲಿ ಅಷ್ಟೇ ವೇಗದಲ್ಲಿ ಸ್ಥಳದಿಂದ ಹೋಗಿದೆ.

ಜನವರಿ 25ರಂದು ಮಾನಂದವಾಡಿಯ ಪ್ರಿಯದರ್ಶಿನಿ ಎಸ್ಟೇಟ್‌ನಲ್ಲಿ ಕಾಫಿ ಬೀಜ ಕೊಯ್ಯುತ್ತಿದ್ದ ಪರಿಶಿಷ್ಟ ಜಾತಿಯ 47 ವರ್ಷದ ಮಹಿಳೆ ರಾಧಾ ಮೇಲೆ ಹುಲಿ ದಾಳಿ ನಡೆಸಿ ಕೊಂದುಹಾಕಿತ್ತು. ಇದಾದ ಸ್ಪಲ್ಪ ಹೊತ್ತಿನಲ್ಲೇ ಅರಣ್ಯ ಕಚೇರಿ ಮುಂದೆ ಜಮಾಯಿಸಿದ್ದ ಸ್ಥಳೀಯರು ಹುಲಿಯನ್ನು ಕೊಂದು ಹಾಕಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.