ಮನೆ ರಾಜ್ಯ ಹನಗೋಡಿನಲ್ಲಿ ಮತ್ತೆ ಹುಲಿ ಪ್ರತ್ಯಕ್ಷ: ಆತಂಕದಲ್ಲಿ ಗ್ರಾಮಸ್ಥರು

ಹನಗೋಡಿನಲ್ಲಿ ಮತ್ತೆ ಹುಲಿ ಪ್ರತ್ಯಕ್ಷ: ಆತಂಕದಲ್ಲಿ ಗ್ರಾಮಸ್ಥರು

0

ಹುಣಸೂರು: ತಾಲೂಕಿನ ಹನಗೋಡಿನಲ್ಲಿ ಮತ್ತೆ ಹುಲಿ ಹೆಜ್ಜೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಹನಗೋಡು ಗ್ರಾಮದ ತಾ.ಪಂ.ಮಾಜಿ ಸದಸ್ಯ ಎಚ್.ಆರ್.ರಮೇಶ್‌ಗೆ ಸೇರಿದ ತೋಟದಲ್ಲಿ ಕಳೆದ ಎರಡು ದಿನಗಳಿಂದ ಕಾಣಿಸಿಕೊಂಡಿದ್ದ ಹುಲಿ ಕುರುಹಾಗಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಹುಲಿಯು ಕಾಡು ಹಂದಿಯೊಂದಿಗೆ ಕಾದಾಡಿ ಭೇಟೆ ಮಾಡಿರುವ ಕುರುಹು ಸ್ಥಳದಲ್ಲಿದೆ.

ಲಕ್ಷ್ಮಣತೀರ್ಥ ನದಿಯ ಏರಿಯಲ್ಲಿ ಸಾಕಷ್ಟು ಪೊದೆಗಳಿವೆ. ಅಲ್ಲದೆ ಸಾಕಷ್ಟು ಗಿಡ-ಗುಂಟೆಗಳು ಬೆಳೆದಿದ್ದು, ಇದು ಹುಲಿ-ಚಿರತೆ ವಾಸಕ್ಕೆ ಪ್ರಶಸ್ತ ಸ್ಥಳವಾಗಿದೆ. ಇದನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಹನಗೋಡಿನ ಸುಮಾರು ಹತ್ತು ಕಿ.ಮೀ. ಸುತ್ತ ಮುತ್ತಲಲ್ಲಿ ಹುಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದೆ. ಅಲ್ಲದೆ  ಹತ್ತಾರು ಜಾನುವಾರುಗಳನ್ನು ಬಲಿ ಪಡೆದಿದೆ. ಕಳೆದ ಆರು ತಿಂಗಳ ಹಿಂದೆ ಒಮ್ಮೆಲೆ ಎರಡು ಹಸುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿದ್ದ ಘಟನೆ ವೇಳೆ ಶೆಟ್ಟಳ್ಳಿ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ನಡೆಸಿದ್ದರೂ ಹುಲಿ ಪತ್ತೆಯಾಗದಿದ್ದರೂ ಆಗಾಗ್ಗೆ ಅಲ್ಲಲ್ಲಿ ಕಾಣಿಸಿಕೊಂಡು ತನ್ನ ಇರುವಿಕೆಯನ್ನು ಸಾಬೀತುಪಡಿಸುತ್ತಲೇ ಇದೆ.

ಹೀಗಾಗಿ ಗ್ರಾಮಸ್ಥರು ಜಮೀನಿಗೆ ತೆರಳಲು ಹೆದರುವಂತಾಗಿದೆ. ಹೇಗಾದರೂ ಸರಿ ಯಾವುದೇ ಪ್ರಾಣ ಹಾನಿಗೂ ಮೊದಲೇ ಮುನ್ನೆಚ್ಚರಿಕೆಯಾಗಿ ಹುಲಿಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕ್ಯಾಮರಾ ಅಳವಡಿಕೆ;

ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಸೀಮಾ, ವಲಯ ಅರಣ್ಯಾಧಿಕಾರಿ ನಂದಕುಮಾರ್ ಹೆಜ್ಜೆ ಕಾಣಿಸಿಕೊಂಡಿರುವ ಸುತ್ತ ಕೂಂಬಿಂಗ್ ನಡೆಸುವುದು, ಕ್ಯಾಮರಾ ಅಳವಡಿಸಿ ಹುಲಿ ಪತ್ತೆಗೆ ಕ್ರಮವಹಿಸಲಾಗುವುದೆಂದು ಮಾಹಿತಿ ನೀಡಿದರು.

ಇದೀಗ ಹುಲಿ ಹೆಜ್ಜೆ ಪತ್ತೆಯಾಗಿರುವ  ಸ್ಥಳಕ್ಕೆ ಡಿ.ಆರ್.ಎಫ್.ಓ ಮಲ್ಲಿಕಾರ್ಜುನ್ ಹಾಗೂ ಸಿಬ್ಬಂದಿ ಭೇಟಿ ಇತ್ತು ಕ್ಯಾಮರಾ ಅಳವಡಿಸಿದ್ದಾರೆ.