ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳ್ಳಂ ಬೆಳಿಗ್ಗೆ ಭೀಕರವಾದ ಅಪಘಾತ ಸಂಭವಿಸಿದೆ. ಶಿವನಗರ ಫ್ಲೈ ಓವರ್ ಬಳಿ ಟಿಪ್ಪರ್ ಲಾರಿ ಪೌರಕಾರ್ಮಿಕ ಮಹಿಳೆಯನ್ನು ಡಿಕ್ಕಿ ಹೊಡೆದ ಪರಿಣಾಮ, ಆಕೆ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪೌರಕಾರ್ಮಿಕ ಸರೋಜಾ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಸರೋಜಾ ತಮ್ಮ ದೈನಂದಿನ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಅತಿವೇಗದಲ್ಲಿ ಬಂದ ಟಿಪ್ಪರ್ ಲಾರಿ ತಡೆತಪ್ಪಿ ನೇರವಾಗಿ ಸರೋಜಾ ಮೇಲಿದೆ. ಅಪಘಾತದ ತೀವ್ರತೆ ಎಷ್ಟು ಭೀಕರವಾಗಿತ್ತೆಂದರೆ, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಅಪಘಾತದ ನಂತರ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಸದ್ಯ ಟಿಪ್ಪರ್ ಲಾರಿಗೆ ಸಂಬಂಧಿಸಿದ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಅಪಘಾತ ಸಂಬಂಧಿತವಾಗಿ ವಿಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಪರಾರಿಯಾದ ಚಾಲಕನಿಗಾಗಿ ಹುಡುಕಾಟ ಆರಂಭಿಸಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಘಟನೆ ಕುರಿತ ಹೆಚ್ಚಿನ ಮಾಹಿತಿಗಳನ್ನು ಬಹಿರಂಗಪಡಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.















