ಮನೆ ಸಾಹಿತ್ಯ ಹೊಸ ಇತಿಹಾಸ ಬರೆದ ಟಿಪ್ಪು ನಿಜಕನಸುಗಳು – ರಂಗ ಪ್ರಯೋಗ

ಹೊಸ ಇತಿಹಾಸ ಬರೆದ ಟಿಪ್ಪು ನಿಜಕನಸುಗಳು – ರಂಗ ಪ್ರಯೋಗ

0

ಮೈಸೂರು:  ರಂಗಾಯಣ ಮೈಸೂರು ಪ್ರಸ್ತುತಪಡಿಸಿದ ವಿಶೇಷ ರಂಗಪ್ರಯೋಗ ‘ಟಿಪ್ಪು ನಿಜಕನಸುಗಳು’ ಕನ್ನಡ ಆಧುನಿಕ ರಂಗಭೂಮಿಯಲ್ಲಿ ಹೊಸ ಇತಿಹಾಸ ಬರೆದಿದೆ.

ಮೈಸೂರು ಅಲ್ಲದೆ, ರಾಜ್ಯದ ದಕ್ಷಿಣ ಭಾಗದ ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಮಂಗಳೂರು, ಹಾಸನ, ಪುತ್ತೂರು, ಕೊಡಗು ಮತ್ತು ಮಂಡ್ಯದಲ್ಲಿ ಒಟ್ಟು 26 ಪ್ರದರ್ಶನಗಳನ್ನು ಕಂಡಿದೆ. ಈ ಎಲ್ಲಾ ಕಡೆ ಸಾವಿರಾರು ಸಂಖ್ಯೆಯಲ್ಲಿ ಟಿಕೆಟ್ ಖರೀದಿಸಿ ಬಂದಿದ್ದ ಪ್ರೇಕ್ಷಕರು ಪ್ರತಿ ರಂಗಮoದಿರದಲ್ಲಿ ‘ಸೋಲ್ಡ್ಔಟ್’ ದಾಖಲೆಯನ್ನು ಬರೆದಿದೆ. ಒಟ್ಟು 20 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ನಾಟಕವನ್ನು ವೀಕ್ಷಿಸಿದ್ದಾರೆ.

ನಾಟಕದ ಪ್ರದರ್ಶನದ ಆರಂಭದ ದಿನಗಳಲ್ಲಿ ನಾಟಕದ ಬಗ್ಗೆ ತಕರಾರು ಎತ್ತಿದ್ದ ಕೆಲವರು ನಾಟಕ ಪ್ರದರ್ಶನಗಳು ಸಾಗುತ್ತಿದ್ದಂತೆ ಮೌನಕ್ಕೆ ಜಾರಿದ್ದಾರೆ. ಟಿಪ್ಪು ಸುಲ್ತಾನನ ಇನ್ನೊಂದು ಕರಾಳ ಮುಖದ ಅನಾವರಣ ಸಾಕ್ಷೀಸಹಿತ ಪ್ರದರ್ಶನವಾಗುತ್ತಿದ್ದಂತೆ ಅವರಿಗೂ ಸತ್ಯದ ಅರಿವಾಗಿದೆ.

ಇತ್ತೀಚೆಗೆ ಸಿಕ್ಕ ಅಧಿಕೃತ ಮಾಹಿತಿಯಂತೆ ಟಿಪ್ಪು ಸುಲ್ತಾನ ಕರ್ನಾಟಕದ ಆನೆಗುಂದಿ ಮತ್ತು ಹಂಪೆಯಲ್ಲಿ ಅನೇಕ ದೇವಾಲಯಗಳನ್ನು ನಾಶಪಡಿಸಿದ್ದು, ಬಯಲಾಗಿದೆ. ಈ ಎಲ್ಲಾ ಮುಚ್ಚಿಟ್ಟ ಸತ್ಯಗಳು ಈ ನಾಟಕದ ಮೂಲಕ ರಾಜ್ಯದಲ್ಲಿ ಹೊಸ ಅಲೆಯನ್ನು ಎಬ್ಬಿಸಿದೆ, ಇದೊಂದು ಆಧುನಿಕ ರಂಗಭೂಮಿಯ ಗೆಲುವಾಗಿದೆ.

ರಂಗಾಯಣ ಉತ್ತರದ ಕಲ್ಯಾಣ ಕರ್ನಾಟಕದ ಪ್ರದರ್ಶನ ಪ್ರವಾಸವನ್ನು ಜನವರಿ 27 ರಿಂದ ಫೆಬ್ರವರಿ 15 ರವರೆಗೆ 2ನೇ ಹಂತದಲ್ಲಿ ಆರಂಭಿಸಿದೆ. ಜನವರಿ 27 ರಂದು ಹುಬ್ಬಳ್ಳಿ, 29 ಧಾರವಾಡ, 31 ಬೆಳಗಾವಿ, ಫೆಬ್ರವರಿ 2 ವಿಜಯಪುರ, 5 ಬಾಗಲಕೋಟೆ, 8 ಬೀದರ್, 9 ಮತ್ತು 10 ಕಲಬುರಗಿ, 12 ರಾಯಚೂರು, 14 ಬಳ್ಳಾರಿ ಹೀಗೆ ಪ್ರದರ್ಶನ ನೀಡಲಿದ್ದು, ಎಲ್ಲಾ ಕಡೆ ಬಹುತೇಕ ಟಿಕೆಟ್‌ಗಳು ಖರೀದಿಯಾಗಿವೆ. ಒಟ್ಟು ನೂರು ಪ್ರದರ್ಶನಗಳ ಗುರಿಯೊಂದಿಗೆ ಹೊರಟಿರುವ ರಂಗಾಯಣ ಫೆಬ್ರವರಿಯ ಅಂತ್ಯಕ್ಕೆ 50 ಪ್ರದರ್ಶನಗಳನ್ನು ಮುಗಿಸಲಿದೆ. ಟಿಪ್ಪು ನಿಜಕನಸುಗಳು ನಾಟಕ ಕೃತಿ ಮಾರಾಟದಲ್ಲೂ ದಾಖಲೆ ಬರೆದಿದೆ.

ಈಗಾಗಲೇ 12ನೇ ಆವೃತ್ತಿ ಮುದ್ರಣ ಕಂಡಿದ್ದು, ಈ ಆವೃತ್ತಿಯನ್ನು ರಾಜ್ಯದ ಮಾಜಿ ಸಚಿವ ಶಾಸಕ ಶ್ರೀ ಸಿ.ಟಿ. ರವಿ ಅವರು ಧಾರವಾಡದಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ರಂಗಾಯಣದ ನಿರ್ದೇಶಕರಾದ ಅಡ್ಡಂಡ ಸಿ, ಕಾರ್ಯಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಲಡಾಖ್‌’ನ ಟ್ರಾವೆಲಿಂಗ್ ಸಿನಿಮಾ ಹಾಲ್’ನಲ್ಲಿ ಬಾಲಿವುಡ್’ನ ಪಠಾಣ್ ಚಿತ್ರ ಪ್ರದರ್ಶನ
ಮುಂದಿನ ಲೇಖನಮಹಿಳೆಯರ ಕ್ರಿಕೆಟ್ ಪ್ರೀಮಿಯರ್ ಲೀಗ್ ಐದು ತಂಡಗಳ ಮಾರಾಟದಿಂದ ಬಿಸಿಸಿಐಗೆ 4669 ಕೋಟಿ ಆದಾಯ