ಮೈಸೂರು, ಸರಗೂರು: ಮೈಸೂರಿನ ಸರಗೂರು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರಣ್ಯ ವೀಕ್ಷಕ ಪಿ. ಸುರೇಶ್ (34) ಅವರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಬೆಳಕಿಗೆ ಬಂದಿದೆ. ಮೇಲಾಧಿಕಾರಿಗಳ ನಿರಂತರ ಕಿರುಕುಳದಿಂದ ಜೀವನೆಂಬ ಹೋರಾಟಕ್ಕೆ ತೆರೆ ಎಳೆದಿರುವ ಈ ಘಟನೆಯು ರಾಜ್ಯದ ಅರಣ್ಯ ಇಲಾಖೆಯ ಕಾರ್ಯಪದ್ಧತಿ ಮೇಲೆ ತೀವ್ರ ಪ್ರಶ್ನೆ ಎಸೆದಿದೆ.
ಸುರೇಶ್ ಅವರು ಅರಣ್ಯ ಸಿಬ್ಬಂದಿಗೆ ಮೀಸಲಾದ ಕ್ವಾರ್ಟರ್ಸ್ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ದಿನಗಳಿಂದ ಕಾಣೆಯಾಗಿದ್ದ ಸುರೇಶ್ ಶವ ಕೊಳೆಯಲು ಆರಂಭವಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರು ಕೊಳೆತ ವಾಸನೆ ಗಂಭೀರಗೊಂಡ ಮೇಲೆ ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ನಡೆದಿದೆ.
ಪೋಲೀಸರ ಪ್ರಾಥಮಿಕ ತನಿಖೆಯ ವೇಳೆ, ಆತ್ಮಹತ್ಯೆಗೆ ಮುನ್ನ ಸುರೇಶ್ ಡೆತ್ ನೋಟ್ ಬರೆದಿಟ್ಟಿರುವುದು ಪತ್ತೆಯಾಗಿದೆ. ಈ ಡೆತ್ ನೋಟ್ನಲ್ಲಿ ಅವರು ಮೇಲಾಧಿಕಾರಿಗಳಿಂದ ಆಗುತ್ತಿದ್ದ ಮಾನಸಿಕ ಕಿರುಕುಳದ ಕುರಿತು ಸ್ಪಷ್ಟವಾಗಿ ಉಲ್ಲೇಖಿಸಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ. ಪ್ರಮುಖವಾಗಿ ಸರಗೂರು ಉಪವಿಭಾಗದ ಎಸಿಎಫ್ ಅಮೃತ ಮಾಯಪ್ಪನವರ್ ಅವರನ್ನು ಈ ಡೆತ್ ನೋಟ್ನಲ್ಲಿ ಹೆಸರಿಸಲಾಗಿದೆ ಎನ್ನಲಾಗಿದೆ.
ಆದರೆ ಸರಗೂರು ಪೊಲೀಸ್ ಠಾಣೆಯಲ್ಲಿ ಹೊಟ್ಟೆನೋವು ತಾಳಲಾರದೇ ಸಾವು ಎಂದು ಪ್ರಕರಣ ದಾಖಲಾಗಿದೆ. ಡೆತ್ ನೋಟ್ ಇದ್ದರೂ ಹೊಟ್ಟೆ ನೋವು ಎಂದು ಎಫ್ .ಐ. ಆರ್ನಲ್ಲಿ ಉಲ್ಲೇಖ ಮಾಡಿದ್ದಾರೆಂದು ಸುರೇಶ್ ಪೋಷಕರು ಆರೋಪಿಸಿದ್ದಾರೆ. ಹಿರಿಯ ಅಧಿಕಾರಿಗಳ ರಕ್ಷಣೆಗೆ ಪೊಲೀಸರು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
“ನಮ್ಮ ಮಗನಿಗೆ ಕೆಲಸದ ಸ್ಥಳದಲ್ಲಿಯೇ ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿತ್ತು. ಆತ ಬರೆದಿಟ್ಟಿದ್ದ ಡೆತ್ ನೋಟ್ನಲ್ಲಿ ಈ ಎಲ್ಲವನ್ನೂ ವಿವರಿಸಿದ್ದಾನೆ. ಆದರೆ ಪೊಲೀಸ್ ವರದಿಯಲ್ಲಿ ಅದನ್ನು ಕಡೆಗಣಿಸಲಾಗಿದೆ”. ಎಂದು ಸುರೇಶ್ ಅವರ ತಂದೆ ಮಾಧ್ಯಮದೊಂದಿಗೆ ಮಾತನಾಡಿದರು.














