ತಿರುಪತಿ: ನೂತನವಾಗಿ ರಚನೆಯಾಗಿರುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಬೋರ್ಡ್ ಈಗ ಸಂಪೂರ್ಣ “ಹಿಂದೂಮಯ’ ಆಗುವತ್ತ ಹೆಜ್ಜೆಯಿಟ್ಟಿದೆ. ಟಿಟಿಡಿ ನೂತನ ಮುಖ್ಯಸ್ಥ ಬಿ.ಆರ್. ನಾಯ್ಡು ನೇತೃತ್ವದಲ್ಲಿ ನಡೆದ ಟ್ರಸ್ಟ್ನ ಮೊದಲ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಅದರಂತೆ ಟಿಟಿಡಿಯ ಹಿಂದೂಯೇತರ ಉದ್ಯೋಗಿಗಳು ಸ್ವಯಂ ನಿವೃತ್ತಿ (ವಿಆರ್ ಎಸ್) ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಆಂಧ್ರಪ್ರದೇಶ ಸರಕಾರದ ಇತರ ಇಲಾಖೆಗಳಿಗೆ ವರ್ಗಾವಣೆ ಆಗಬೇಕು ಎಂದು ಸೂಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಷ್ಟೇ ಅಲ್ಲದೆ ದೇಗುಲದ ಆವರಣದಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅಂಗಡಿಗಳನ್ನು ಇಡಲು ಅವಕಾಶ ಕಲ್ಪಿಸಲಾಗುವುದು. ಅಲ್ಲೂ ಇತರ ಧರ್ಮೀಯರಿಗೆ ಅವಕಾಶ ಇಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ.
ಈ ವರ್ಷದ ಜೂನ್ನಲ್ಲಿ ಆಂಧ್ರಪ್ರದೇಶದಲ್ಲಿ ಟಿಡಿಪಿ-ಜನಸೇನಾ-ಬಿಜೆಪಿ ಮೈತ್ರಿಕೂಟದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಟಿಟಿಡಿ ಆಡಳಿತ ಮಂಡಳಿಯನ್ನು ಪುನಾರಚಿಸಲಾಗಿತ್ತು. ಅನಂತರ ನಡೆದ ಮಂಡಳಿಯ ಮೊದಲ ಸಭೆಯಲ್ಲಿ ಟಿಟಿಡಿಯಲ್ಲಿ ಹಿಂದೂ ಉದ್ಯೋಗಿಗಳು ಮಾತ್ರ ಇರಬೇಕು ಎಂಬ ತೀರ್ಮಾನ ಕೈಗೊಳ್ಳಲಾಗಿದೆ. ಒಟ್ಟು 7 ಸಾವಿರ ಮಂದಿ ಉದ್ಯೋಗಿಗಳು ಟಿಟಿಡಿಯಲ್ಲಿದ್ದು, ಈ ಪೈಕಿ 300 ಮಂದಿ ಹಿಂದೂಯೇತರರು ಇದ್ದಾರೆ ಎನ್ನಲಾಗಿದೆ.
ಉದ್ಯೋಗಿಗಳ ವಿವಿಧ ಸಂಘಟನೆಗಳ ಜತೆಗೆ ಮಾತುಕತೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಜತೆಗೆ ಆಂಧ್ರಪ್ರದೇಶ ಧಾರ್ಮಿಕ ದತ್ತಿ ಮತ್ತು ತಿರುಪತಿ ತಿರುಮಲ ಕಾಯ್ದೆಯ ಅನ್ವಯ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಉದ್ಯೋಗಿಗಳ ಸಂಘದ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ. ಹಿಂದೂ ಧಾರ್ಮಿಕ ಕೇಂದ್ರದಲ್ಲಿ ಅದಕ್ಕೆ ಸಂಬಂಧಪಟ್ಟವರೇ ಸಿಬಂದಿಯಾಗಿ ಇರಬೇಕು ಎಂಬ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ತಿರುಪತಿ ತಿರುಮಲ ದೇವಸ್ಥಾನ ಕಾಯ್ದೆಗೆ 3 ಬಾರಿ ತಿದ್ದುಪಡಿ ತರಲಾಗಿತ್ತು.
ಮಾಧ್ಯಮ ಪ್ರತಿನಿಧಿಗಳಿಗೆ ಸಭೆಯ ವಿವರಗಳ ನೀಡಿದ ಟಿಟಿಡಿ ಟ್ರಸ್ಟ್ ಬೋರ್ಡ್ ಅಧ್ಯಕ್ಷ ಬಿ.ಆರ್. ನಾಯ್ಡು, ಟಿಟಿಡಿಯೊಂದಿಗೆ ಕೆಲಸ ಮಾಡುವ ಇತರ ಧರ್ಮದ ನೌಕರರೊಂದಿಗೆ ಸಮಾಲೋಚನೆ ನಡೆಸಲು ಮಂಡಳಿಯು ನಿರ್ಧಾರ ತೆಗೆದುಕೊಂಡಿದೆ. ಸ್ವಯಂ ನಿವೃತ್ತಿ ಪಡೆಯುವ ಅಥವಾ ಬೇರೆ ಯಾವುದೇ ಸರ್ಕಾರಿ ಇಲಾಖೆಗೆ ಸೇರುವ ಆಯ್ಕೆಯನ್ನು ಅವರಿಗೆ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯ ಸರಕಾರಕ್ಕೆ ಪತ್ರ
ತಿರುಮಲದಲ್ಲಿ ಕೆಲಸ ಮಾಡುತ್ತಿರುವ ಹಿಂದೂಯೇತರರ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಸರಕಾರಕ್ಕೆ ಪತ್ರ ಬರೆಯುತ್ತೇವೆ. ಟಿಟಿಡಿ ಹಿಂದೂ ಧಾರ್ಮಿಕ ಸಂಸ್ಥೆಯಾಗಿದ್ದು, ದೇವಸ್ಥಾನದಲ್ಲಿ ಕೆಲಸ ಮಾಡಲು ಹಿಂದೂಯೇತರರ ನೇಮಿಸಿಕೊಳ್ಳಬಾರದು ಎಂದು ಮಂಡಳಿ ಅಭಿಪ್ರಾಯಪಟ್ಟಿದೆ. ಅವರನ್ನು ಬೇರೆ ಬೇರೆ ಇಲಾಖೆಗಳಲ್ಲಿ ಸೇರಿಸಿಕೊಳ್ಳಲು ಅಥವಾ ಅವರಿಗೆ ಸ್ವಯಂ ನಿವೃತ್ತಿ ಯೋಜನೆ ನೀಡಲು ನಾವು ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದು ಬಿ.ಆರ್ ನಾಯ್ದು ಹೇಳಿದ್ದಾರೆ.
ಟಿಟಿಡಿಯಿಂದ ಭೂಮಿಯನ್ನು ಗುತ್ತಿಗೆಗೆ ಪಡೆದಿರುವ ವಿಶಾಖ ಶಾರದಾ ಪೀಠವು ಹಲವಾರು ಉಲ್ಲಂಘನೆಗಳ ಮಾಡಿದೆ ಎಂದು ಪ್ರತಿಪಾದಿಸಿದ ಅವರು, ಜಮೀನು ಗುತ್ತಿಗೆ ರದ್ದುಗೊಳಿಸಲಾಗುವುದು ಮತ್ತು ಭೂಮಿಯಲ್ಲಿ ನಿರ್ಮಿಸಲಾದ ಕಟ್ಟಡ ನೆಲಸಮಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.