ಹನಗೋಡು: ಹನಗೋಡು ಹೋಬಳಿಯ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆ ವ್ಯಾಪ್ತಿಯ ಕೊತ್ತೇಗಾಲ, ಕಲ್ಲಹಳ್ಳಿ ಹಾಗೂ ಚಿಲ್ಕುಂದ ಗ್ರಾಮಗಳ ತಂಬಾಕು ಬೆಳೆ ಜಮೀನುಗಳಿಗೆ ಕೇಂದ್ರೀಯ ತಂಬಾಕು ಮಂಡಳಿ ನಿರ್ದೇಶಕಿ ವಿಶ್ವಶ್ರೀ ಅಧಿಕಾರಿಗಳೊಂದಿಗೆ ಬುಧವಾರ ಸಂಜೆ ಭೇಟಿ ನೀಡಿ ತಂಬಾಕು ಬೆಳೆಯನ್ನು ವೀಕ್ಷಿಸಿ, ಪರಿಶೀಲನೆ ನಡೆಸಿ ರೈತರಿಂದ ಹಲವಾರು ಮಾಹಿತಿ ಪಡೆದರು.
ಈ ವೇಳೆ ಪ್ರಗತಿಪರ ರೈತರಾದ ಶಿವಣ್ಣ, ಶಿವಬಸಪ್ಪ, ಕರುಣಕರ, ಪ್ರವೀಣ ಮಾದೇಗೌಡ, ಸುರೇಶ್, ಮಾದೇವಪ್ಪ ಸೇರಿದಂತೆ ರೈತ ಮುಖಂಡರು ಮಾತನಾಡಿ ಬಾರಿ ಮುಂಗಾರು ಮಳೆ ಹೆಚ್ಚು ಸುರಿದ ಪರಿಣಾಮ ಬೆಳೆಗೆ ಕೊಟ್ಟ ಗೊಬ್ಬರವೂ ಕೂಡ ಮಳೆ ನೀರಿನಲ್ಲಿ ತೊಯ್ದು ಹೋಗಿದೆ. ಭೂಮಿಯಲ್ಲಿ ಅತಿ ಹೆಚ್ಚು ತೇವಾಂಶ ಕೂಡಿದ್ದರಿಂದ ಬೆಳೆ ಸರಿಯಾಗಿ ಬಾರದೇ ಇಳುವರಿ ಕಡಿಮೆಯಾಗಿದೆ. ಈ ನಡುವೆಯೂ ಬೆಳೆದಿರುವ ತಂಬಾಕಿನ ಗುಣಮಟ್ಟ ಕಡಿಮೆಯಾಗಿದೆ. ಕಾರ್ಮಿಕರ ಕೂಲಿ ಹಾಗೂ ಸೌದೆ ಬೆಲೆ ದುಪ್ಪಟ್ಟಾಗಿದೆ ಎಂದು ಮಾಹಿತಿ ನೀಡಿ ಈ ಬಾರಿ ತಂಬಾಕಿಗೆ ಉತ್ತಮ ಬೆಲೆ ದೊರಕಿಸಲು ಕೇಂದ್ರಿಯ ತಂಬಾಕು ಮಂಡಳಿ ಪ್ರಯತ್ನಿಸಬೇಕೆಂದು ಮನವಿ ಮಾಡಿದರು.
ಕೇಂದ್ರ ತಂಬಾಕು ಮಂಡಳಿಯ ನಿರ್ದೇಶಕಿ ವಿಶ್ವಶ್ರೀ ಮಾತನಾಡಿ ಈ ಭಾಗದ ಕೆಲ ರೈತರು ಅವಧಿ ಮುನ್ನವೇ ಮಾರ್ಚಿ ತಿಂಗಳಲ್ಲಿ ಬೆಳೆ ನಾಟಿ ಮಾಡಿದ ಪರಿಣಾಮ ಬೆಳೆ ಕುಂಠಿತವಾಗಿದೆ. ಸಕಾಲದಲ್ಲಿ ನಾಟಿ ಮಾಡಿರುವ ತಂಬಾಕು ಬೆಳೆ ಶೇ.೯೦ರಷ್ಟು ಉತ್ತಮವಾಗಿದ್ದು, ಗುಣಮಟ್ಟದಿಂದ ಕೂಡಿದೆ ಎಂಬ ಮಾಹಿತಿ ಇದೆ. ರೈತರು ಹೆಚ್ಚಿನ ಪ್ರದೇಶದಲ್ಲಿ ಕಡಿಮೆ ಇಳುವರಿ ಹಾಗೂ ಗುಣಮಟ್ಟವಿಲ್ಲದ ಬೆಳೆ ಬೆಳೆಯುವ ಬದಲು ಕಡಿಮೆ ವಿಸ್ತೀರ್ಣ ಪ್ರದೇಶದಲ್ಲಿ ಹೆಚ್ಚಿನ ಇಳುವರಿಯೊಂದಿಗೆ ಗುಣಮಟ್ಟದ ಬೆಳೆ ಬೆಳೆಯಲು ಪ್ರಯತ್ನಿಸಿ. ಇದರಿಂದ ಕಡಿಮೆ ಖರ್ಚಿನೊಂದಿಗೆ ಹೆಚ್ಚು ಆದಾಯ ಗಳಿಸಲು ಸಾಧ್ಯವಾಗುತ್ತದೆ. ತಂಬಾಕು ಜೊತೆಗೆ ಮಿಶ್ರ ಬೇಸಾಯಕ್ಕೆ ಆದ್ಯತೆ ನೀಡಿರೆಂದು ಸಲಹೆ ನೀಡಿ, ಕರ್ನಾಟಕದ ತಂಬಾಕಿಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆ ಇದೆ. ಯಾರು ಕೂಡ ಕಾಳಸಂತೆಯಲ್ಲಿ ತಂಬಾಕು ಮಾರಾಟ ಮಾಡದೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕೆಂದು ಮನವಿ ಮಾಡಿದರು.
ಈ ವೇಳೆ ಮೈಸೂರು ಪ್ರಾದೇಶಿಕ ವ್ಯವಸ್ಥಾಪಕರುಗಳಾದ ಗೋಪಾಲ್ ಎಚ್ ಕೆ., ಮಾರಣ್ಣ, ವ್ಯವಸ್ಥಾಪಕಿ ಜೆ ಸುರೇಖಾ, ಚಿಲ್ಕುಂದ ಹರಾಜು ಮಾರುಕಟ್ಟೆ ಅಧೀಕ್ಷಕ ಸಿದ್ದರಾಮ್ ಡೆಂಗೆ, ಕ್ಷೇತ್ರಾಧಿಕಾರಿಗಳಾದ ಸುದೀಪ್, ರೂಪ, ಸೇರಿದಂತೆ ರೈತ ಮುಖಂಡರು ಇದ್ದರು.















