ಅಹಮದಾಬಾದ್: ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಎದುರು ನೋಡುತ್ತಿರುವ ಐಸಿಸಿ (ICC) ಏಕದಿನ ವಿಶ್ವಕಪ್ ಇಂದಿನಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ.
ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಸೆಣಸಲಿವೆ. ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿವೆ.
ಇಂಗ್ಲೆಂಡ್ ಏಕದಿನ ಮತ್ತು ಟಿ20 ಎರಡೂ ಮಾದರಿಯಲ್ಲೂ ಹಾಲಿ ಚಾಂಪಿಯನ್ ಆಗಿದೆ. ಹೀಗಾಗಿ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಗೆಲ್ಲುವ ಫೆವರೆಟ್ ಎನಿಸಿಕೊಂಡಿದೆ. ಇತ್ತ ಕಳೆದ ಬಾರಿಯ ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿರುವ ಕಿವೀಸ್ ಕೂಡ ಬಲಿಷ್ಠ ಪಡೆಯನ್ನು ಕಟ್ಟಿಕೊಂಡು ಭಾರತಕ್ಕೆ ಬಂದಿಳಿದಿದೆ.
ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದ್ದು, ಪಂದ್ಯಕ್ಕೂ ಮುನ್ನ ಮಧ್ಯಾಹ್ನ 1.30ಕ್ಕೆ ಟಾಸ್ ನಡೆಯಲಿದೆ. ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಮೊದಲ ವಿಶ್ವಕಪ್ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ನಲ್ಲಿ ನೋಡಬಹುದು. ಇದಲ್ಲದೆ, ಇದನ್ನು ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಅಪ್ಲಿಕೇಶನ್ ನಲ್ಲಿ ಮೊಬೈಲ್ ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.
ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ), ಡೇವಿಡ್ ಮಲನ್, ಜಾನಿ ಬೈರ್ಸ್ಟೋ, ಜೋ ರೂಟ್,ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್ ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್.
ನ್ಯೂಜಿಲೆಂಡ್: ಟಾಮ್ ಲ್ಯಾಥಮ್ (ನಾಯಕ), ಡೆವೊನ್ ಕಾನ್ವೆ, ವಿಲ್ ಯಂಗ್, ಡ್ಯಾರಿಲ್ ಮಿಚೆಲ್, ಮಾರ್ಕ್ ಚಾಪ್ನನ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ.