ಮನೆ ಸುದ್ದಿ ಜಾಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರ ಏರಿಕೆ – ಏ.1ರಿಂದ ಪ್ರಯಾಣ ದುಬಾರಿ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರ ಏರಿಕೆ – ಏ.1ರಿಂದ ಪ್ರಯಾಣ ದುಬಾರಿ

0

ನವದೆಹಲಿ : ಏ.1ರಿಂದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರಗಳಲ್ಲಿ ಹೆಚ್ಚಳವಾಗಲಿದ್ದು, ಪ್ರಯಾಣ ವೆಚ್ಚ ಮತ್ತಷ್ಟು ಏರಿಕೆಯಾಗಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರತಿ ವರ್ಷದಂತೆ ಈ ಬಾರಿಯೂ ಟೋಲ್ ದರಗಳನ್ನು ಪರಿಷ್ಕರಿಸಿದ್ದು, 4%ನಿಂದ 5%ನಷ್ಟು (75 ರೂ.) ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದರ ಏರಿಕೆ ಕಾರು, ಬಸ್, ಲಾರಿ ಸೇರಿದಂತೆ ಎಲ್ಲಾ ವಾಹನಗಳಿಗೆ ಅನ್ವಯವಾಗಲಿದೆ. ಹೆದ್ದಾರಿಗಳ ನಿರ್ವಹಣೆ, ದುರಸ್ತಿ ಹಾಗೂ ಅಭಿವೃದ್ಧಿ ವೆಚ್ಚಗಳನ್ನು ಗಣನೆಗೆ ತೆಗೆದುಕೊಂಡು ಈ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಎನ್‌ಹೆಚ್‌ಎಐ ಅಧಿಕಾರಿಗಳು ಹೇಳಿದ್ದಾರೆ.

ಕರ್ನಾಟಕದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸೇರಿದಂತೆ 8 ಇತರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ಏರಿಕೆಯ ಪರಿಣಾಮ ಬೀರಲಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಟೋಲ್ ಸಂಗ್ರಹ ಆರಂಭವಾದ 2023ರ ಏ.1ರಿಂದ ಇದು ನಾಲ್ಕನೇ ಬಾರಿಗೆ ದರ ಏರಿಕೆಯಾಗುತ್ತಿದೆ. ಹಿಂದೆ 2023ರ ಜೂನ್‌ನಲ್ಲಿ ಘೋಷಿಸಲಾದ 22% ಏರಿಕೆಯನ್ನು ಜನರ ವಿರೋಧದಿಂದ ಹಿಂಪಡೆಯಲಾಗಿತ್ತು. ಆದರೆ ವಾರ್ಷಿಕವಾಗಿ ಸುಮಾರು 5% ಏರಿಕೆಯನ್ನು ಮುಂದುವರೆಸಲಾಗುತ್ತಿದೆ.

ಇದಲ್ಲದೆ, ಫಾಸ್ಟ್ಟ್ಯಾಗ್ ಬಳಕೆಯನ್ನು ಉತ್ತೇಜಿಸಲು ಹೊಸ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಫಾಸ್ಟ್ಟ್ಯಾಗ್‌ನಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದಿದ್ದರೆ ಅಥವಾ ತಾಂತ್ರಿಕ ದೋಷದಿಂದ ಪಾವತಿ ವಿಫಲವಾದರೆ ಡಬಲ್ ಟೋಲ್ ಶುಲ್ಕ ವಿಧಿಸಲಾಗುವುದು. ಇದರಿಂದ ಟೋಲ್ ಪ್ಲಾಜಾಗಳಲ್ಲಿ ವಾಹನ ಸಂಚಾರದ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ಇದೆ.

ಪ್ರತಿ ವರ್ಷ ಏಪ್ರಿಲ್ 1ರಿಂದ ಟೋಲ್ ದರಗಳ ಪರಿಷ್ಕರಣೆಯನ್ನು ಮಾಡುವ ಪದ್ಧತಿಯಂತೆ ಈ ಬಾರಿಯೂ ಜಾರಿಗೊಳಿಸಲಾಗುತ್ತಿದ್ದು, ದೈನಂದಿನ ಸಂಚಾರಿಕರು, ಉದ್ಯೋಗಿಗಳು ಹಾಗೂ ವ್ಯಾಪಾರಸ್ಥರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ ಎಂದು ಆತಂಕ ವ್ಯಕ್ತವಾಗಿದೆ. ಸದ್ಯ ಟೋಲ್‌ ಪಾಸ್‌ ದರ 3,000 ಇದ್ದು ಏ.1ರಿಂದ 3,075 ರೂ. ಆಗಲಿದೆ. ಟೋಲ್‌ ಪಾಸ್‌ ಹೊಂದಿರುವವರು 200 ಟ್ರಿಪ್‌ ಹೋಗಬಹುದು. ಎನ್‌ಹೆಚ್‌ಎಐಯ ಈ ನಿರ್ಧಾರದಿಂದ ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಪ್ರಯಾಣಿಸುವವರಿಗೆ ಆರ್ಥಿಕ ಒತ್ತಡ ಹೆಚ್ಚಾಗಲಿದೆ.