ಬೆಂಗಳೂರು/ಮೈಸೂರು : ರಾಜ್ಯದ ವಾಹನ ಸವಾರರ ಜೇಬಿಗೆ ಕತ್ತರಿ ಬೀಳುವ ದಿನಗಳು ಹತ್ತಿರದಲ್ಲಿವೆ. ಕರ್ನಾಟಕದ ಬಹುತೇಕ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ದರಗಳನ್ನು ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಶೇ 3ರಿಂದ 5ರಷ್ಟು ಹೆಚ್ಚಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಪ್ರತಿ ವರ್ಷ ನಡೆಯುವ ಹಣದುಬ್ಬರ ಆಧಾರಿತ ದರ ಪರಿಷ್ಕರಣೆಯ ಭಾಗವಾಗಿ ಈ ಏರಿಕೆ ಮಾಡಲಾಗುತ್ತಿದೆ.
ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ರಾಜ್ಯದ ಬಹುತೇಕ ಎಲ್ಲ ಟೋಲ್ ಪ್ಲಾಜಾಗಳಿಗೆ ಈ ಹೊಸ ದರ ಅನ್ವಯವಾಗಲಿದೆ. ಕೇವಲ 10 ಪ್ಲಾಜಾಗಳಲ್ಲಿ ಮಾತ್ರ ಸೆಪ್ಟೆಂಬರ್ 1 ರಿಂದ ದರ ಏರಿಕೆಯಾಗಲಿದೆ ಎಂದು ತಿಳಿಸಿದ್ದಾರೆ.
ಟೋಲ್ ದರಗಳನ್ನು ಉದಾಹರಣೆಗೆ, ಬೆಲೆ ಸೂಚ್ಯಂಕದ ಆಧಾರದ ಮೇಲೆ ದರವು 2.5 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಹೆಚ್ಚಳ ಕಂಡರೆ, ಅದನ್ನು ನೇರವಾಗಿ 5 ರೂಪಾಯಿಗಳಿಗೆ ಹೆಚ್ಚಿಸಲಾಗುತ್ತದೆ. ಸದ್ಯ ಬೆಂಗಳೂರಿನ ಸುತ್ತಮುತ್ತಲಿನ ಮತ್ತು ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಈ ದರ ಏರಿಕೆ ಕಂಡುಬರಲಿದೆ.
ಯಾವೆಲ್ಲ ಟೋಲ್ ಪ್ಲಾಜಾಗಳಲ್ಲಿ ದರ ಏರಿಕೆ? :-
- ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ : ಕಣಮಿಣಿಕೆ ಮತ್ತು ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳು.
- ಬೆಂಗಳೂರು-ಹೈದರಾಬಾದ್ ಹೆದ್ದಾರಿ : ಬಾಗೇಪಲ್ಲಿ ಟೋಲ್
- ಬೆಂಗಳೂರು ವಿಮಾನ ನಿಲ್ದಾಣ ರಸ್ತೆ : ಸಾದಹಳ್ಳಿ ಟೋಲ್ ಪ್ಲಾಜಾ
- ಬೆಂಗಳೂರು-ತಿರುಪತಿ ರಸ್ತೆ : ನಂಗ್ಲಿ ಟೋಲ್
- ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್ಟಿಆರ್ಆರ್): ಹುಲಿಕುಂಟೆ ಮತ್ತು ನಲ್ಲೂರು ದೇವನಹಳ್ಳಿ ಟೋಲ್ ಪ್ಲಾಜಾಗಳು
ಏಪ್ರಿಲ್ 1 ರಿಂದ ಪರಿಷ್ಕೃತ ದರಗಳ ಅಧಿಕೃತ ಅಧಿಸೂಚನೆ ಹೊರಬೀಳಲಿದ್ದು, ಅಂದಿನಿಂದಲೇ ವಾಹನ ಸವಾರರು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಇದು ಸರಕು ಸಾಗಣೆ ವಾಹನಗಳ ಮೇಲೂ ಪರಿಣಾಮ ಬೀರಲಿದ್ದು, ದಿನಬಳಕೆಯ ವಸ್ತುಗಳ ಬೆಲೆಯಲ್ಲೂ ವ್ಯತ್ಯಾಸವಾಗುವ ಸಾಧ್ಯತೆಯಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರ ಪರಿಷ್ಕರಣೆಯಾಗುತ್ತಿದ್ದು, ಅದರಲ್ಲೂ ವಿಶೇಷವಾಗಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣಿಕರಿಗೆ ಇದು ದೊಡ್ಡ ಹೊರೆಯಾಗಿ ಪರಿಣಮಿಸಲಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕೆ.ಬಿ. ಜಯಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದ್ದು, ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರ ನಿರ್ಧಾರ ಮತ್ತು ಸಂಗ್ರಹಣೆ) ನಿಯಮಗಳು, 2008ರ ಅನ್ವಯ ಈ ಪರಿಷ್ಕರಣೆ ಮಾಡಲಾಗುತ್ತಿದೆ. ಸರ್ಕಾರಿ ಅನುದಾನಿತ ಎಲ್ಲ ಟೋಲ್ ಪ್ಲಾಜಾಗಳಲ್ಲಿ ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ (ಏಪ್ರಿಲ್ 1) ದರ ಏರಿಕೆಯಾಗುತ್ತದೆ. ಆದರೆ, 2008ಕ್ಕಿಂತ ಮೊದಲು ಕಾರ್ಯಾಚರಣೆ ಆರಂಭಿಸಿರುವ ‘ಬಿಲ್ಡ್-ಆಪರೇಟ್-ಟ್ರಾನ್ಸ್ಫರ್’ ಟೋಲ್ ಪ್ಲಾಜಾಗಳಿಗೆ 1997ರ ನಿಯಮಗಳು ಅನ್ವಯವಾಗಲಿದ್ದು, ಅಲ್ಲಿ ವರ್ಷದ ಬೇರೆ ಸಮಯದಲ್ಲಿ ದರ ಬದಲಾಗಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
2023ರಲ್ಲಿ ಉದ್ಘಾಟನೆಯಾದಾಗಿನಿಂದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಹಲವಾರು ಬಾರಿ ಟೋಲ್ ದರ ಏರಿಕೆಯನ್ನು ಕಂಡಿದೆ. ಈ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಏಕಮುಖ ಸಂಚಾರಕ್ಕೆ 180 ರೂಪಾಯಿ ಟೋಲ್ ಪಾವತಿಸುವುದು ದುಬಾರಿಯಾಗಿದೆ. ಪ್ರತಿ ಬಾರಿ ದರ ಏರಿಕೆಯಾದಾಗಲೂ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ ಎಂದು ಸವಾರರು ದೂರಿದ್ದಾರೆ.
ಬೆಂಗಳೂರಿನಿಂದ ಕೇರಳ ಮತ್ತು ಕೊಡಗಿಗೆ ತೆರಳುವ ಪ್ರವಾಸಿಗರ ಮೇಲೆ ಇದು ನೇರ ಪರಿಣಾಮ ಬೀರಲಿದೆ. ಈಗಾಗಲೇ ಒಂದು ರಸ್ತೆ ಪ್ರಯಾಣಕ್ಕೆ 2,000 ದಿಂದ 3,000 ರೂಪಾಯಿಗಳವರೆಗೆ ಟೋಲ್ ಖರ್ಚು ಬರುತ್ತಿದೆ. ಈ ಹೊರೆಯನ್ನು ನಾವು ಗ್ರಾಹಕರ ಮೇಲೆ ಹಾಕಲೇಬೇಕಾಗುತ್ತದೆ ಎಂದು ಟ್ರಾವೆಲ್ ಏಜೆನ್ಸಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ಈ ಬಾರಿ ಗರಿಷ್ಠ ಶೇ 5ರಷ್ಟು ದರ ಏರಿಕೆಯಾಗುವ ಸಾಧ್ಯತೆಯಿದ್ದು, ಶೀಘ್ರದಲ್ಲೇ ಪರಿಷ್ಕೃತ ದರಗಳ ಅಧಿಕೃತ ಪಟ್ಟಿಯನ್ನು ಹೆದ್ದಾರಿ ಪ್ರಾಧಿಕಾರ ಪ್ರಕಟಿಸಲಿದೆ. ಪ್ರಮುಖವಾಗಿ ಬೆಂಗಳೂರು-ಮೈಸೂರು, ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು ವಿಮಾನ ನಿಲ್ದಾಣ ರಸ್ತೆಗಳಲ್ಲಿ ಸಂಚರಿಸುವವರು ಏಪ್ರಿಲ್ನಿಂದ ಹೆಚ್ಚಿನ ಹಣ ಪಾವತಿಸಲು ಸಿದ್ಧರಾಗಬೇಕಿದೆ.















