ಹಾಸನ: ಜಮೀನಿನಲ್ಲಿ ಬೆಳೆದಿದ್ದ 2.5 ಲಕ್ಷ ರೂಪಾಯಿ ಮೌಲ್ಯದ ಟೊಮ್ಯಾಟೊ ಕಳ್ಳತನವಾಗಿರುವ ಘಟನೆ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿಯಲ್ಲಿ ನಡೆದಿದೆ.
ರಾತ್ರೋರಾತ್ರಿ 2 ಎಕರೆ ಜಮೀನಿನಲ್ಲಿದ್ದ ತರಕಾರಿಯನ್ನು ವಾಹನದಲ್ಲಿ ಕಳ್ಳರು ಕದ್ದೊಯ್ದಿದ್ದಾರೆ ಎಂದು ರೈತ ಕುಟುಂಬ ತಿಳಿಸಿದೆ
ರೈತ ಮಹಿಳೆ ಧರಣಿ ಮಾತನಾಡಿ, ಹುರುಳಿ ಬೆಳೆಯಲ್ಲಿ ಅಪಾರ ನಷ್ಟ ಅನುಭವಿಸಿದ ಬಳಿಕ ಸಾಲ ಮಾಡಿ ಟೊಮೆಟೊ ಬೆಳೆ ಬೆಳೆದಿದ್ದೆವು. ಬೆಂಗಳೂರಿನಲ್ಲಿ ಕೆಜಿ ಟೊಮೆಟೊ 120 ರೂ. ತಲುಪಿದ್ದರಿಂದ ಬೆಳೆ ಕತ್ತರಿಸಿ ಮಾರುಕಟ್ಟೆಗೆ ಸಾಗಿಸಲು ಮುಂದಾಗಿದ್ದೆವು. ಈ ಬಾರಿ ಉತ್ತಮ ಫಸಲು ಬಂದಿದ್ದು, ಬೆಲೆಯೂ ಹೆಚ್ಚಿತ್ತು. ಆದ್ರೆ, ರಾತ್ರಿ ಕಳ್ಳರು 50-60 ಚೀಲ ಟೊಮೆಟೊ ತೆಗೆದುಕೊಂಡು ಹೋಗಿದ್ದಲ್ಲದೆ, ಉಳಿದ ಬೆಳೆಯನ್ನೂ ನಾಶಪಡಿಸಿದ್ದಾರೆ. ಕೆಳಗಡೆ ಹೊಲದಲ್ಲಿ ಸಂಪೂರ್ಣ ಲೂಟಿ ಮಾಡಿ ಹೋಗಿದ್ದಾರೆ ಎಂದು ಕಣ್ಣೀರು ಹಾಕಿದರು.
ನಮ್ಮ ತೋಟದಲ್ಲಿ ತರಕಾರಿ ಲೂಟಿ ಮಾಡಿರೋದು ಇದೇ ಮೊದಲು. ಈ ಹಿಂದೆ ಶುಂಠಿ ಕಳ್ಳತನ ಮಾಡಿದ್ರು. ಬೆಲೆ ಜಾಸ್ತಿ ಆಗಿದೆ ಅಂತ ತರಕಾರಿ ಕದ್ದು ತೆಗೆದುಕೊಂಡು ಹೋಗಿದ್ದಾರೆ. ರಾತ್ರಿ ಹೊಲದಲ್ಲೇ ಕುಡಿದು, ಪಾರ್ಟಿ ಮಾಡಿ ಕಳ್ಳರು ಪರಾರಿಯಾಗಿದ್ದಾರೆ. ಈ ಬಾರಿ ಬೆಳೆ ಕೂಡ ಚೆನ್ನಾಗಿ ಬಂದಿತ್ತು, ತುಂಬಾ ಸಾಲ ಕೂಡ ಮಾಡಿಕೊಂಡಿದ್ದೆ. ಆದ್ರೆ, ಎಲ್ಲ ಹಣ ಕಳ್ಳರ ಪಾಲಾಗಿದೆ ಎಂದು ಧರಣಿ ಅವರ ಪುತ್ರ ಬೇಸರ ವ್ಯಕ್ತಪಡಿಸಿದರು.
ಹಳೇಬೀಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.