ಮೈಸೂರು (Mysuru): ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಚಾಮುಂಡಿಬೆಟ್ಟದಲ್ಲಿ ಆ಼ಷಾಢ ಶುಕ್ರವಾರದ ಪೂಜೆ ಸರಳ ಹಾಗೂ ಸಾಂಪ್ರದಾಯಿಕ ಆಚರಣೆಗೆ ಸೀಮಿತವಾಗಿತ್ತು. ಈ ಬಾರಿ ಅದ್ಧೂರಿಯಾಗಿ ಪೂಜೆ ನೆರವೇರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ನಾಳೆ ಮೊದಲ ಆಷಾಢ ಶುಕ್ರವಾರವಾಗಿದ್ದು, ಚಾಮುಂಡಿ ಬೆಟ್ಟದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ. ನಾಡದೇವತೆ ಚಾಮುಂಡಿಗೆ ವಿಶೇಷ ಪೂಜೆ ಪುರಸ್ಕಾರ ನಡೆಸಲು ತಯಾರಿ ನಡೆಸಲಾಗಿದೆ.
ದೇವಾಲಯದ ಆವರಣ ಸ್ವಚ್ಛ ಮಾಡಲಾಗುತ್ತಿದ್ದು, ಹೂವುಗಳ ಅಲಂಕಾರಕ್ಕಾಗಿ ಕಂಬಿಗಳ ಬೇಲಿ ಅಳವಡಿಸಲಾಗುತ್ತಿದೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬರುವ ಕಾರಣ ಸರದಿ ಸಾಲಿನಲ್ಲಿ ದೇವಿಯ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗುತ್ತಿದೆ. ಕೊರೊನಾ ಮುಂಜಾಗ್ರತೆ ಕ್ರಮ ವಹಿಸುವಂತೆ ಈಗಿನಿಂದಲೇ ಭಕ್ತರಿಗೆ ಮೈಕ್ ಮೂಲಕ ಮುನ್ನೆಚ್ಚರಿಕೆ ಸೂಚನೆ ನೀಡಲಾಗುತ್ತಿದೆ. ಖಾಸಗಿ ವಾಹನಗಳನ್ನು ನಿಷೇಧಿಸಲಾಗಿದ್ದು, ಭಕ್ತರಿಗಾಗಿ ಬಸ್ ವ್ಯವಸ್ಥೆ ಮಾಡಲಾಗಿದೆ.