ಬೆಂಗಳೂರು(Bengaluru): ಹೊಸ ಸಂಶೋಧನೆಗಳು ಮತ್ತು ಆವಿಷ್ಕಾರಕ್ಕೆ ಬೆಂಗಳೂರು ಕೇಂದ್ರ ಸ್ಥಾನದಂತಿದ್ದು, ಆವಿಷ್ಕಾರ ಸೂಚ್ಯಂಕದಲ್ಲಿ ದೇಶದಲ್ಲೇ ಅಗ್ರಸ್ಥಾನ ಪಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.
ಬುಧವಾರ ಆರಂಭವಾದ ಬೆಂಗಳೂರು ತಂತ್ರಜ್ಞಾನ ಶೃಂಗದ ಉದ್ಘಾಟನಾ ಸಮಾರಂಭದಲ್ಲಿ ವರ್ಚ್ಯುಯಲ್ ಆಗಿ ಭಾಗವಹಿಸಿ ಮಾತನಾಡಿದ ಅವರು, ಆವಿಷ್ಕಾರ ಕಾರಣಗಳಿಂದಾಗಿಯೇ ಜಗತ್ತಿನ ಜನರು ಬೆಂಗಳೂರಿನತ್ತ ನೋಡುತ್ತಿದ್ದಾರೆ ಎಂದರು.
ಭಾರತೀಯ ಯುವಜನರು ಈಗ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಫಿನ್ ಟೆಕ್ ಉದ್ಯಮಗಳನ್ನು ಮುನ್ನಡೆಸುತ್ತಿದ್ದಾರೆ. _ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತವು 2015ರಲ್ಲಿ 81ನೇ ಸ್ಥಾನದಲ್ಲಿತ್ತು. ಈಗ 40ನೇ ಸ್ಥಾನಕ್ಕೆ ಏರಿದೆ. ನವೋದ್ಯಮಗಳ ಸಂಖ್ಯೆಯಲ್ಲಿ ಭಾರತವು ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಮೋದಿ ಹೇಳಿದರು.
ಕೇಂದ್ರ ಸರ್ಕಾರವು ಸಂಶೋಧನೆ, ಅಭಿವೃದ್ಧಿ ಮತ್ತು ಆವಿಷ್ಕಾರಗಳಿಗೆ ನಿರಂತರ ಬೆಂಬಲ ನೀಡುತ್ತಿದೆ. ಆಡಳಿತದಲ್ಲೂ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಗುತ್ತದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಸಮಾನತೆ ತರಲು ಮತ್ತು ಜನರ ಸಶಕ್ತೀಕರಣಕ್ಕೆ ತಂತ್ರಜ್ಞಾನ ಅತ್ಯುತ್ತಮ ಸಾಧನ ಎಂದರು.