ಮನೆ ರಾಜ್ಯ ಸ್ಥಳೀಯ, ಗ್ರಾಮೀಣ ಕ್ರೀಡೆಗಳ ಪ್ರೋತ್ಸಾಹಕ್ಕೆ ಆದ್ಯತೆ ನೀಡಿ: ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು

ಸ್ಥಳೀಯ, ಗ್ರಾಮೀಣ ಕ್ರೀಡೆಗಳ ಪ್ರೋತ್ಸಾಹಕ್ಕೆ ಆದ್ಯತೆ ನೀಡಿ: ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು

0

ಬೆಂಗಳೂರು (Bengaluru) ಕಬಡ್ಡಿ, ಖೋ-ಖೋ ರೀತಿಯ ಸ್ಥಳೀಯ ಹಾಗೂ ಗ್ರಾಮೀಣ ಕ್ರೀಡೆಗಳ ಪ್ರೋತ್ಸಾಹಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಉಪ ರಾಷ್ಟ್ರಪತಿ (Vice President) ಎಂ. ವೆಂಕಯ್ಯ ನಾಯ್ಡು (M. Venkayya Naidu) ಹೇಳಿದರು.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಎರಡನೇ ಆವೃತ್ತಿಯ ಖೇಲೋ ಇಂಡಿಯಾ (Khelo India )ಯೂನಿವರ್ಸಿಟಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಕ್ರೀಡೆಗಳು ನಮ್ಮ ರಾಷ್ಟ್ರದ ಹೆಮ್ಮೆಯ ಮೂಲಗಳಾಗಿವೆ. ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಪ್ರೋತ್ಸಾಹಿಸಬೇಕಾದ ಅಗತ್ಯವಿದೆ. ಕ್ರೀಡೆಗಳು ಅಥವಾ ಯೋಗ ನಮ್ಮ ಶಾಲಾ ಪಠ್ಯಕ್ರಮದಲ್ಲಿ ಅವಿಭಾಜ್ಯ ಅಂಗವಾಗಬೇಕು ಎಂದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ಕರ್ನಾಟಕ ರಾಜ್ಯ ಅಂತಾರಾಷ್ಟ್ರೀಯ ಸೌಲಭ್ಯಗಳೊಂದಿಗೆ ಕ್ರೀಡಾ ಸ್ಥಳಗಳನ್ನು ವ್ಯಾಪಕವಾಗಿ ನವೀಕರಿಸುತ್ತಿದೆ. ಈ ಸುಧಾರಣೆಗಳು ರಾಜ್ಯದಲ್ಲಿ ಹೊಸ ಕ್ರೀಡಾ ಪ್ರತಿಭೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಉತ್ತಮ ಮತ್ತು ಆರೋಗ್ಯಕರ ಜೀವನಕ್ಕಾಗಿ ಜನರು ತಮ್ಮ ದಿನಚರಿಯಲ್ಲಿ ಕ್ರೀಡೆ ಮತ್ತು ಫಿಟ್ನೆಸ್ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕ್ರೀಡಾಪಟುಗಳು ಕ್ರೀಡೆಗಳನ್ನು ಪ್ರಾಮಾಣಿಕವಾಗಿ ಆಡಬೇಕು. ಸೋಲು, ಗೆಲುವು ಆಟದ ಭಾಗ. ಎರಡನ್ನೂ ಸಮನಾಗಿ ತೆಗೆದುಕೊಂಡು ಕ್ರೀಡಾ ಸ್ಪೂರ್ತಿ ಪ್ರದರ್ಶಿಸಬೇಕು. ಗೆಲ್ಲಲೇಬೇಕೆಂಬ ಛಲದೊಂದಿಗೆ ಆಟವಾಡಬೇಕು. ಸೋಲಿನ ಭಯ ಇಲ್ಲದಿದ್ದರೆ ಗೆಲುವು ನಿಮ್ಮದಾಗುತ್ತದೆ ಎಂದು  ಸಲಹೆ ನೀಡಿದರು. 

ಖೇಲೋ ಇಂಡಿಯಾ ಕ್ರೀಡಾಕೂಟವನ್ನು ಆಯೋಜಿಸಿರುವುದು ನಮಗೆ ಅತ್ಯಂತ ಹೆಮ್ಮೆಯ ಸಂಗತಿ. ಬೆಂಗಳೂರು ಇಡೀ ದೇಶದಲ್ಲಿಯೇ ಅತ್ಯಂತ ಪ್ರಗತಿಪರವಾಗಿರುವ ರಾಜಧಾನಿಯಾಗಿದೆ. ಖೇಲೋ ಇಂಡಿಯಾ ವಿವಿಮಟ್ಟದ ಕ್ರೀಡಾಕೂಟ ಆಯೋಜಿಸಲು ಮೂಲಭೂತ ಸೌಕರ್ಯ ಮತ್ತು ಸಾಮರ್ಥ್ಯ ಹೆಚ್ಚಿಸಿಕೊಂಡಿದ್ದೇವೆ.  ರಾಷ್ಟ್ರಮಟ್ಟದಲ್ಲಿ ಯಾವುದೇ ಕ್ರೀಡಾಕೂಟ ಇದ್ದರೂ ಪ್ರಥಮ ಆದ್ಯತೆಯನ್ನು ಬೆಂಗಳೂರಿಗೆ ನೀಡಬೇಕು ಎಂದರು.

ಕೇಂದ್ರ ವಾರ್ತಾ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್, ಕ್ರೀಡಾ ಸಚಿವ ಡಾ. ನಾರಾಯಣಗೌಡ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.