ತೆಲಂಗಾಣ: ಶಾಸಕರ ಸ್ಟಿಕ್ಕರ್ ಹೊಂದಿರುವ ವಾಹನವೊಂದು ತನ್ನ ನಿಯಂತ್ರಣ ಕಳೆದುಕೊಂಡಿದ್ದು, ಫುಟ್ ಪಾತ್ ಮೇಲೆ ಹರಿದ ಪರಿಣಾಮ 2.5 ತಿಂಗಳ ನವಜಾತ ಗಂಡು ಮಗು ಸಾವನ್ನಪ್ಪಿದ್ದು, 1 ವರ್ಷದ ಮಗು ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನ ಹೈದರಾಬಾದ್ನ ಜುಬಿಲಿ ಹಿಲ್ಸ್ನಲ್ಲಿ ನಡೆದಿದೆ.
ನಿನ್ನೆ ರಾತ್ರಿ 9ಗಂಟೆಗೆ ಈ ವಾಹನ ಮಾದಾಪುರದಿಂದ ಕೇಬಲ್ ಸೇತುವೆ ಮೇಲಿನ ಜುಬಿಲಿ ಹಿಲ್ಸ್ ರಸ್ತೆ 45ರ ಕಡೆ ವೇಗವಾಗಿ ತೆರಳುತ್ತಿತ್ತು. ಸೇತುವೆ ದಾಟಿದ ಬಳಿಕ ಏಕಾಏಕಿ ನಿಯಂತ್ರಣ ಕಳೆದುಕೊಂಡಿದ್ದು ಫುಟ್ಪಾತ್ನಲ್ಲಿ ಬಲೂನ್ ಮಾರುತ್ತಿದ್ದ ಬೀದಿ ವ್ಯಾಪಾರಿಗಳ ಮೇಲೆ ನುಗ್ಗಿದೆ. ಪರಿಣಾಮ ಮಹಾರಾಷ್ಟ್ರದ ಕಾಜಲ್, ಸಾರಿಕಾ ಹಾಗೂ ಸುಷ್ಮಾ ಗಾಯಗೊಂಡಿದ್ದಾರೆ.
ಅಪಘಾತದ ವೇಳೆ ಕಾಜಲ್ ಕೈಯಲ್ಲಿದ್ದ ಎರಡೂವರೆ ತಿಂಗಳ ಮಗು ರಣವೀರ್ ಸಾವನ್ನಪ್ಪಿದ್ದು, ಸಾರಿಕಾ ಕೈಯಲ್ಲಿದ್ದ ಒಂದು ವರ್ಷದ ಮಗು ಗಂಭೀರವಾಗಿ ಗಾಯಗೊಂಡಿದೆ. ಅಪಘಾತ ನಡೆಯುತ್ತಿದ್ದಂತೆ ಚಾಲಕ ವಾಹನ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳುಗಳನ್ನು ಜುಬಿಲಿ ಹಿಲ್ಸ್ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಸಕ ಶಕೀಲ್ ಅಮೀರ್ ಮೊಹಮ್ಮದ್ ಹೆಸರಿನ ಸ್ಟಿಕ್ಕರ್ ಹೊಂದಿರುವ ಕಾರು ಇದಾಗಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.