ನಗೋಯಾ (ಜಪಾನ್): ತುಮಕೂರಿನ ಬಳಿ ಇರುವ ಜಪಾನ್ ಕೈಗಾರಿಕಾ ಟೌನ್‌ಶಿಪ್‌ನಲ್ಲಿ ₹ 210 ಕೋಟಿ ವೆಚ್ಚದಲ್ಲಿ ವಾಹನ ಬಿಡಿಭಾಗಗಳನ್ನು ತಯಾರಿಸುವ ಘಟಕವನ್ನು ಸ್ಥಾಪಿಸುವ ಒಪ್ಪಂದಕ್ಕೆ ಕೈಗಾರಿಕಾ ಸಲಕರಣೆಗಳನ್ನು ತಯಾರಿಸುವ ಜಪಾನಿನ ಅವೊಯಮಾ ಸೈಸಕುಷೊ ಕಂಪನಿಯು ಸಹಿ ಹಾಕಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರ ಸಮ್ಮುಖದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಅವೊಯಮಾ ಸೈಸಕುಷೊ ಕಂಪನಿಯ ಅಧ್ಯಕ್ಷ ಯುಕಿಯೋಷಿ ಅವೊಯಮಾ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಟೊಯೊಟಾ ಕಂಪನಿಯ ವಾಹನ ಬಿಡಿಭಾಗಗಳನ್ನು ತಯಾರಿಸುವ ಅವೊಯಮಾ, ತುಮಕೂರಿನ ಜಪಾನ್ ಕೈಗಾರಿಕಾ ಟೌನ್‌ಶಿಪ್‌ನಲ್ಲಿ ಈ ಘಟಕ ಸ್ಥಾಪಿಸಲು 20 ಎಕರೆ ಭೂಮಿಯನ್ನು ಗುರುತಿಸಿದೆ.
ಟಯೊಟಾಗೆ ಭೇಟಿ
ರಾಜ್ಯದ ನಿಯೋಗವು ವಾಹನ ತಯಾರಿಕಾ ಬಹುರಾಷ್ಟ್ರೀಯ ದೈತ್ಯ ಕಂಪನಿ ಟೊಯೊಟೊದ ಮುಖ್ಯಸ್ಥರನ್ನು ಭೇಟಿಯಾಗಿ ಚರ್ಚೆ ನಡೆಸಿತು. ಕಂಪನಿಯ ಪ್ರಾಜೆಕ್ಟ್ ಜನರಲ್ ಮ್ಯಾನೇಜರ್ ಟಕಾವೊ ಐಬಾ, ಟೊಯೊಟಾ ಕಿರ್ಲೋಸ್ಕರ್ ಮೋಟರ್‌ನ ಹಿರಿಯ ಉಪಾಧ್ಯಕ್ಷ ಸುದೀಪ್ ಎಸ್. ದಳವಿ ಅವರು ಸಮಾಲೋಚನೆಯಲ್ಲಿ ಭಾಗಿಯಾಗಿದ್ದರು. ರಾಜ್ಯದಲ್ಲಿನ ಟೊಯೊಟಾದ ಭವಿಷ್ಯದ ಹೂಡಿಕೆ ಅವಕಾಶಗಳ ಬಗ್ಗೆ ಚರ್ಚೆ ನಡೆಸಲಾಯಿತು. ಜಾಗತಿಕ ಹೂಡಿಕೆದಾರರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ಮತ್ತು ರಾಜ್ಯದ ಕೈಗಾರಿಕಾ ಸಾಮರ್ಥ್ಯಗಳನ್ನು ಹೆಚ್ಚಿಸುವ ರಾಜ್ಯ ಸರ್ಕಾರದ ಬದ್ಧತೆಯನ್ನು ಸಚಿವರು ಸಭೆಯಲ್ಲಿ ಪುನರುಚ್ಚರಿಸಿದರು. ಟೊಯೊಟಾ ಮತ್ತು ಅವೊಯಮಾ ಕಂಪನಿಗಳ ಜೊತೆಗಿನ ಸಮಾಲೋಚನೆಗಳು ಉದ್ಯಮ ಸ್ನೇಹಿ ಸೌಲಭ್ಯಗಳನ್ನು ಒದಗಿಸುವ ರಾಜ್ಯದ ಬದ್ಧತೆಗೆ ನಿದರ್ಶನಗಳಾಗಿವೆ.
ರಾಜ್ಯ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಹೊಸ ಶುದ್ಧ ಇಂಧನ ಸಂಚಾರ ನೀತಿ ಹಾಗೂ ಗೌರಿಬಿದನೂರು, ಧಾರವಾಡದಲ್ಲಿ ವಾಹನ ತಯಾರಿಕಾ ಉದ್ಯಮದ ನೆರವಿಗಾಗಿ ಎರಡು ದೊಡ್ಡ ಕೈಗಾರಿಕಾ ಸಮೂಹಗಳನ್ನು ಸ್ಥಾಪಿಸಲಾಗುತ್ತಿರುವುದನ್ನು ನಿಯೋಗವು ಟೊಯೊಟಾದ ಮುಖ್ಯಸ್ಥರ ಗಮನಕ್ಕೆ ತಂದಿತು. ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಟೊಯೊಟಾಕ್ಕೆ ಅಗತ್ಯ ಇರುವ ಎಲ್ಲ ಬಗೆಯ ನೆರವನ್ನು ರಾಜ್ಯ ಸರ್ಕಾರದಿಂದ ಒದಗಿಸಲಾಗುವುದು ಎಂದು ಸಚಿವ ಪಾಟೀಲ ಅವರು ಭರವಸೆ ನೀಡಿದರು.
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಇದ್ದರು.