ಮನೆ ಅಪರಾಧ ಟ್ರ್ಯಾಕ್ಟರ್ -ಖಾಸಗಿ ಬಸ್ ಡಿಕ್ಕಿ: ನಾಲ್ವರ ಸಾವು

ಟ್ರ್ಯಾಕ್ಟರ್ -ಖಾಸಗಿ ಬಸ್ ಡಿಕ್ಕಿ: ನಾಲ್ವರ ಸಾವು

0

ಕೊಪ್ಪಳ: ಟ್ರ್ಯಾಕ್ಟರ್ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿಯಾಗಿ ನಾಲ್ವರು ಸಾವಿಗೀಡಾದ ಘಟನೆ ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

Join Our Whatsapp Group

ಟ್ರ್ಯಾಕ್ಟರ್​ಗೆ ಹಿಂದಿನಿಂದ ಬಂದ ಖಾಸಗಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ನಡೆದಿದೆ. ಟ್ರಾಕ್ಟರ್‌ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಓರ್ವ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸುಮಾರು 18ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಮೃತರನ್ನು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ ಬಸವರಾಜ (22), ತೇಜಸ್​ (22), ದುರುಗಮ್ಮ (65) ಹಾಗೂ ಗದಗ ಜಿಲ್ಲೆ ತಿಮ್ಮಾಪುರ ಗ್ರಾಮದ ಕೊಂಡಪ್ಪ (60) ಎಂದು ಗುರುತಿಸಲಾಗಿದೆ.

ಕರಮುಡಿ ಗ್ರಾಮದಿಂದ ಶಿವಪ್ಪ ಎಂಬುವರು ಸಂಬಂಧಿಕರೊಡಗೂಡಿ 30 ಜನರು ಗುರುವಾರ ಕೊಪ್ಪಳ ತಾಲೂಕಿನ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಟ್ರ್ಯಾಕ್ಟರ್​​​ನಲ್ಲಿ ಬಂದಿದ್ದರು. ದೇವಸ್ಥಾನಕ್ಕೆ ಬಂದು ಶುಕ್ರವಾರ ಹರಕೆ ತೀರಿಸಿಕೊಂಡು ವಾಪಸ್‌ ಟ್ರ್ಯಾಕ್ಟರ್​ನಲ್ಲಿ ಊರಿಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಹೊಸಲಿಂಗಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವಾಗಿದೆ.

ಗಾಯಗೊಂಡವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ 65 ವರ್ಷದ ದುರುಗಮ್ಮ ಅಸುನೀಗಿದ್ದಾರೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುನಿರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾಹಿತಿ ನೀಡಿ,  ಟ್ರ್ಯಾಕ್ಟರ್​ ಗೆ ಹಿಂದಿನಿಂದ ಖಾಸಗಿ ಬಸ್​ ಡಿಕ್ಕಿಯಾಗಿ ಅಪಘಾತವಾಗಿದೆ ಎಂದು ಗೊತ್ತಾಗಿದೆ. ಟ್ರ್ಯಾಕ್ಟರ್​ನಲ್ಲಿದ್ದವರು ಹುಲಗಿಯಿಂದ ಜಾತ್ರೆ ಮುಗಿಸಿಕೊಂಡು ತಮ್ಮ ಊರಿನತ್ತ ಬರುತ್ತಿದ್ದರು. ಡಿಕ್ಕಿ ರಭಸಕ್ಕೆ ಹಲವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಈಗಾಗಲೇ ನಾಲ್ವರು ಮೃತಪಟ್ಟಿದ್ದಾರೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಘಟನಾ ಸ್ಥಳದ ಪರಿಶೀಲನೆ ನಡೆಸಿದ್ದು, ಬಸ್​ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿರುವಂತೆ ಕಾಣುತ್ತಿದೆ. ಬಸ್​ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ತಿಳಿಸಿದರು.