ಚಿಕ್ಕಬಳ್ಳಾಪುರ (Chikkaballapur): ವಾರಂತ್ಯದ ಹಿನ್ನೆಲೆಯಲ್ಲಿ ಪ್ರಸಿದ್ಧ ನಂದಿ ಗಿರಿಧಾಮದಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ಸಂಚಾರ ದಟ್ಟಣೆ ಹೆಚ್ಚಾಗಿದೆ.
ಗಿರಿಧಾಮದ ವಾಹನ ನಿಲುಗಡೆ ಸ್ಥಳದಲ್ಲಿ 300 ಕಾರುಗಳ ನಿಲುಗಡೆಗೆ ಮಾತ್ರ ಜಿಲ್ಲಾಡಳಿತ ಅವಕಾಶ ನೀಡುತ್ತಿದೆ. ಆದರೆ ಶನಿವಾರ ಮತ್ತು ಭಾನುವಾರ ಪ್ರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗಿರಿಧಾಮಕ್ಕೆ ಭೇಟಿ ನೀಡುವರು. ಹೀಗಾಗಿ ಬೆಟ್ಟದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ.
ಬೆಟ್ಟಕ್ಕೆ ಹೋದ ಕಾರುಗಳು ವಾಪಸ್ ಆದ ನಂತರವೇ ಕೆಳಗೆ ಇರುವ ಕಾರುಗಳು ಗಿರಿಧಾಮಕ್ಕೆ ಹೋಗಲು ಅವಕಾಶ ನೀಡಲಾಗುತ್ತದೆ.
ವಾರಾಂತ್ಯದಲ್ಲಿ ಪ್ರವಾಸಿಗರು ಹೆಚ್ಚುವ ಕಾರಣ ಬೆಳಿಗ್ಗೆಯೇ ಪಾರ್ಕಿಂಗ್ ಸ್ಥಳ ವಾಹನಗಳಿಂದ ತುಂಬುತ್ತದೆ. ಆ ನಂತರ ಬರುವ ಪ್ರವಾಸಿಗರಿಗೆ ಪ್ರವೇಶ ದೊರೆಯುವುದು ದುಸ್ತರ. ಪ್ರತಿ ಶನಿವಾರ ಮತ್ತು ಭಾನುವಾರ ಕಿಲೋ ಮೀಟರ್ ಗಟ್ಟಲೆ ವಾಹನಗಳು ನಿಲ್ಲುತ್ತವೆ.
ಭಾನುವಾರ ಕಾರಹಳ್ಳಿ ಕ್ರಾಸ್‌ನಿಂದಲೇ ವಾಹನ ದಟ್ಟಣೆ ಉಂಟಾಗಿದೆ. ನಂದಿಗಿರಿಧಾಮದ ಪ್ರವೇಶ ದ್ವಾರದಲ್ಲಿ ಈ ದಟ್ಟಣೆ ಮತ್ತಷ್ಟು ಹೆಚ್ಚಿದೆ.