ಮಂಗಳೂರು: ಮಂಗಳೂರು ನಗರದ ಸಮೀಪದ ಕುತ್ತಾರಿನಲ್ಲಿ ದುರ್ಘಟನೆ ಸಂಭವಿಸಿದೆ. 12ನೇ ಮಹಡಿಯಲ್ಲಿ ಬಟ್ಟೆ ಒಣಗಿಸಲು ಹೋಗಿದ್ದ 15 ವರ್ಷದ ವಿದ್ಯಾರ್ಥಿನಿ ಅಪಾರ್ಟ್‌ಮೆಂಟ್‌ನ ಮೇಲಿಂದ ಬಿದ್ದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಮೃತ ಯುವತಿಯ ಹೆಸರು ಹಿಬಾ ಐಮನ್ (15). ವೈದ್ಯ ದಂಪತಿ ಡಾ. ಮುಮ್ತಾಜ್ ಅಹ್ಮದ್ ಅವರ ಮಗಳು. ಅವರು ಕುಟುಂಬದೊಂದಿಗೆ ಮಂಗಳೂರು ಕುತ್ತಾರು ಪ್ರದೇಶದ ಬಹುಮಹಡಿ ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಲ್ಲಿ ವಾಸವಾಗಿದ್ದರು.
ಗುರುವಾರ ರಾತ್ರಿ ಹಿಬಾ ಬಟ್ಟೆ ಒಣಗಿಸಲು ಟೆರೇಸ್ ಮೇಲೆ ತೆರಳಿದ್ದ ವೇಳೆ ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾಳೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಘಟನೆ ನಡೆದ ತಕ್ಷಣ ಮಂಗಳೂರು ಉಳ್ಳಾಲ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ತನಿಖೆ ಪ್ರಕಾರ ಇದು ದುರ್ಘಟನೆ ಆಗಿರಬಹುದು ಎನ್ನಲಾಗುತ್ತಿದೆ. ಆದರೆ ಖಚಿತಪಡಿಸಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.














