ಮೆಕ್ಸಿಕೋ : ದಕ್ಷಿಣ ಮೆಕ್ಸಿಕೋದ ಓಕ್ಸಾಕದಲ್ಲಿ ಇಂಟರ್ ಓಷಿಯಾನಿಕ್ ರೈಲು ಹಳಿ ತಪ್ಪಿದೆ. ಪರಿಣಾಮ 13 ಮಂದಿ ಸಾವನ್ನಪ್ಪಿದ್ದು, 98 ಜನರು ಗಾಯಗೊಂಡಿದ್ದಾರೆ.
ಈ ಕುರಿತು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಒಂಬತ್ತು ಸಿಬ್ಬಂದಿ ಹಾಗೂ 241 ಪ್ರಯಾಣಿಕರು ಸೇರಿದಂತೆ ಒಟ್ಟು 250 ಜನರಿದ್ದ ರೈಲು ಸಲೀನಾ ಕ್ರೂಜ್ ಬಂದರುನಿಂದ ಕೋಟ್ಜಾಕೋಲ್ಕೋಸ್‌ಕ್ಕೆ ತೆರಳುತ್ತಿತ್ತು.
ಈ ವೇಳೆ ನಿಜಾಂಡಾ ಪಟ್ಟಣದ ಬಳಿ ತೆರಳುತ್ತಿದ್ದಾಗ ರೈಲು ಹಳಿ ತಪ್ಪಿದೆ. ಪರಿಣಾಮ 13 ಜನರು ಸಾವನ್ನಪ್ಪಿದ್ದು, 98 ಜನರು ಗಾಯಗೊಂಡಿದ್ದಾರೆ. ಈಗಾಗಲೇ 36 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ 193 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಎಕ್ಸ್‌ನಲ್ಲಿ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಸ್ಥರಿಗೆ ಅಗತ್ಯ ಸಹಾಯ ಮಾಡಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಮೆಕ್ಸಿಕೋದ ಅಟಾರ್ನಿ ಜನರಲ್ ಕಚೇರಿ ಈಗಾಗಲೇ ಘಟನೆಯ ಬಗ್ಗೆ ತನಿಖೆ ಆರಂಭಿಸಿದೆ ಎಂದು ಹೇಳಿದ್ದಾರೆ.















