ನವದೆಹಲಿ : ಟ್ರೈನ್ನಲ್ಲಿ ಊರಿಗೆ ಹೋಗಬೇಕೆನ್ನುವವರು ತಿಂಗಳುಗಳ ಹಿಂದೆಯೇ ಟಿಕೆಟ್ ಬುಕಿಂಗ್ ಮಾಡುವುದು ಈಗ ಅನಿವಾರ್ಯ. ಅದರಲ್ಲೂ ಬಹಳ ಸಾಮಾನ್ಯವಾದ ಮಾರ್ಗಗಳ ಟ್ರೈನುಗಳ ಟಿಕೆಟ್ ಸಿಗುವುದು ನಿಜಕ್ಕೂ ದೊಡ್ಡ ಅದೃಷ್ಟದಂತೆ ಭಾಸವಾಗುತ್ತದೆ.
ಎರಡು ತಿಂಗಳ ಮುಂಚೆ ಬುಕಿಂಗ್ ವಿಂಡೋ ಆರಂಭವಾಗಿ ಕೆಲವೇ ನಿಮಿಷಗಳಲ್ಲಿ ಟಿಕೆಟ್ಗಳು ಬುಕ್ ಆಗಿಯೇ ಬಿಡುತ್ತವೆ. ಮಧ್ಯವರ್ತಿಗಳು, ಬೋಟ್ಗಳೇ ಹೆಚ್ಚಾಗಿ ಟಿಕೆಟ್ ಕಾಯ್ದಿರಿಸಿಬಿಟ್ಟಿರುತ್ತವೆ. ಇದನ್ನು ತಪ್ಪಿಸಲು ಭಾರತೀಯ ರೈಲ್ವೆ ಇಲಾಖೆಯ ಐಆರ್ಸಿಟಿಸಿ ಈಗ ಆಧಾರ್ ದೃಢೀಕರಣ ನಿಯಮವೊಂದನ್ನು ಜಾರಿಗೆ ತರಲು ಹೊರಟಿದೆ.
ಅಕ್ಟೋಬರ್ 1ರಿಂದ ಜಾರಿಗೆ ಬರಲಿರುವ ಈ ಹೊಸ ನಿಯಮದ ಪ್ರಕಾರ ಬುಕಿಂಗ್ ವಿಂಡೋ ಆರಂಭವಾದ ಮೊದಲ 15 ನಿಮಿಷಗಳಲ್ಲಿ ಯಾರು ಟಿಕೆಟ್ ಬುಕಿಂಗ್ ಮಾಡಲು ಮುಂದಾಗುತ್ತಾರೋ ಅವರು ಆಧಾರ್ ದೃಢೀಕರಣ ಮಾಡಬೇಕು ಎಂಬುದು ಕಡ್ಡಾಯವಾಗಿದೆ.
ಈ ಮುಂಚೆ, ತತ್ಕಾಲ್ ಸ್ಕೀಮ್ ಅಡಿ ಟಿಕೆಟ್ ಬುಕಿಂಗ್ ಮಾಡಲು ಆಧಾರ್ ದೃಢೀಕರಣ ಕಡ್ಡಾಯವಾಗಿತ್ತು. ಈಗ ಜನರಲ್ ರಿಸರ್ವೇಶನ್ಗಳಿಗೂ ಮೊದಲ 15 ನಿಮಿಷ ಆಧಾರ್ ಅಥೆಂಟಿಕೇಶನ್ ನಿಯಮ ತರಲಾಗಿದೆ. ಬುಕಿಂಗ್ ವಿಂಡೋ ಶುರುವಾಗಿ 15 ನಿಮಿಷಗಳ ಬಳಿಕ ಆಧಾರ್ ಅಥೆಂಟಿಕೇಶನ್ ಅವಶ್ಯಕತೆ ಇಲ್ಲದೆಯೇ ಯಾರು ಬೇಕಾದರೂ ಬುಕಿಂಗ್ ಮಾಡಲು ಅವಕಾಶ ಇರುತ್ತದೆ.
ಇಲ್ಲಿ ಮೇಲೆ ತಿಳಿಸಿರುವ ಆಧಾರ್ ಅಥೆಂಟಿಕೇಶನ್ ನಿಯಮವು ಆನ್ಲೈನ್ನಲ್ಲಿ ಮೊದಲ 15 ನಿಮಿಷದಲ್ಲಿ ಮಾಡಲಾಗುವ ಬುಕಿಂಗ್ಗಳಿಗೆ ಮಾತ್ರ. ರೈಲ್ವೆ ಸೆಂಟರ್ಗಳ ಕೌಂಟರ್ಗಳಲ್ಲಿ ಯಥಾಪ್ರಕಾರ ಹೋಗಿ ಟಿಕೆಟ್ ಬುಕಿಂಗ್ ಮಾಡಿಸಿಕೊಳ್ಳಬಹುದು. ಅದರಲ್ಲಿ ಯಾವ ಬದಲಾವಣೆಯೂ ಇಲ್ಲ ಎಂದು ತಿಳಿಸಿದೆ.
ರೈಲ್ವೆ ಟಿಕೆಟ್ ಬುಕಿಂಗ್ ಮಾಡಿಸಿಕೊಡುವ ಏಜೆಂಟ್ಗಳಿರುತ್ತಾರೆ. ಅವರಿಗೂ ಕೂಡ ಈಗಿರುವ ನಿಯಮವೇ ಮುಂದುವರಿಯುತ್ತದೆ. ಅಂದರೆ, ಟಿಕೆಟ್ ಬುಕಿಂಗ್ ವಿಂಡೋ ತೆರೆದು ಮೊದಲ 10 ನಿಮಿಷ ಈ ಏಜೆಂಟ್ಗಳು ಟಿಕೆಟ್ ಬುಕಿಂಗ್ ಮಾಡಲು ಅವಕಾಶ ಇರುವುದಿಲ್ಲ.
ನೀವು ರೆಗ್ಯುಲರ್ ಆಗಿ ರೈಲಿನಲ್ಲಿ ಓಡಾಡುತ್ತೀರಿ ಎಂದಾದರೆ ಮತ್ತು ನೀವೇ ಸ್ವತಃ ಟಿಕೆಟ್ ಬುಕಿಂಗ್ ಮಾಡುತ್ತೀರಿ ಎಂದಾದರೆ, ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ಅಕೌಂಟ್ ತೆರೆಯುವುದು ಉತ್ತಮ. ಆ ನಿಮ್ಮ ಅಕೌಂಟ್ಗೆ ಆಧಾರ್ ಲಿಂಕ್ ಮಾಡಿರಬೇಕು. ಆಗ ಟಿಕೆಟ್ ಬುಕಿಂಗ್ ತೆರೆದ ಮೊದಲ 15 ನಿಮಿಷದಲ್ಲಿ ಐಆರ್ಸಿಟಿಸಿಗೆ ಲಾಗಿನ್ ಆಗಿ ಆಧಾರ್ ದೃಢೀಕರಣದೊಂದಿಗೆ ಟಿಕೆಟ್ ಬುಕಿಂಗ್ ಮಾಡಬಹುದು.














