ಕೊಪ್ಪಳ : ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣ ಹೆಚ್ಚುತ್ತಿದ್ದು, ಭ್ರಷ್ಟ್ರಾಚಾರಕ್ಕೆ ಸರ್ಕಾರ ಮೂಗುದಾರ ಹಾಕಲು ಮುಂದಾಗಿದೆ. ಲಂಚಗುಳಿತನ ಹಾಗೂ ಅನೇಕ ವರ್ಷದಿಂದ ಇಲ್ಲೇ ಬೀಡುಬಿಟ್ಟ ಅಧಿಕಾರಿಗಳನ್ನು ವರ್ಗಾಯಿಸಿ ಕ್ರಮಕೈಗೊಳ್ಳಲು ಬಸವರಾಜ ರಾಯರೆಡ್ಡಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ತುಂಗಭದ್ರಾ ನದಿ, ಹಿರೇಹಳ್ಳದಲ್ಲಿ ಮರಳು ಅಕ್ರಮ ಅವ್ಯಾಹತವಾಗಿದೆ. ನಿಯಂತ್ರಣ ಅಸಾಧ್ಯ ಎಂಬಂತಾಗಿದೆ. ಹಿರೇಹಳ್ಳದಲ್ಲಿನ ಅಕ್ರಮ ಕುರಿತು ಮಾಧ್ಯಮಗಳಲ್ಲಿ ವರದಿ ಆಗುತ್ತಲೇ ಎಚ್ಚೆತ್ತ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಬೂದಗುಂಪಾ, ಕೆರೆಹಳ್ಳಿ, ಬಂಡಿ ಹರ್ಲಾಪುರ ಭಾಗದಲ್ಲಿ ಅಕ್ರಮ ಗ್ರಾನೈಟ್ ಗಣಿಗಾರಿಕೆ ನಡೆಯುತ್ತಿದೆ. ಈ ಬಗ್ಗೆ ದಾಖಲಾದ ದೂರು ಆಧರಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹೆಚ್ಚುವರಿ ನಿರ್ದೇಶಕ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿ, ವರದಿ ಸಲ್ಲಿಸಿದೆ.
ಕುಕನೂರು ತಾಲೂಕಿನ ತಳಕಲ್ ಗ್ರಾಮದ 9.4 ಎಕರೆ ಬೆಣ್ಣಿಕೆರೆಯಲ್ಲಿ ಹೂಳು ತೆರವು ಮಾಡಲಾಗಿದೆ. ಇದರಲ್ಲಿ ಮೊದಲು ಹೂಳು ಮಾರಾಟ ಮಾಡಿ, ರಾಜಧನ ಪಾವತಿಗೆ ಸೂಚಿಸಲಾಗಿದೆ. ಬಳಿಕ ಆದೇಶ ಮಾರ್ಪಡಿಸಿ ಹೂಳನ್ನು ಮಾರಾಟ ಮಾಡದಂತೆ ಆದೇಶಿಸಲಾಗಿದೆ. ಈ ಮೂಲಕ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ತನಿಖೆ ವೇಳೆ ದೃಢಪಟ್ಟಿದೆ. ಈ ಸಂಬಂಧ ಇಲಾಖೆ ನಿರ್ದೇಶಕರಿಗೆ ವರದಿ ಸಲ್ಲಿಕೆಯಾಗಿದ್ದು, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ.
ಕೊಪ್ಪಳ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕೆಲ ಅಧಿಕಾರಿಗಳು ಹಲವು ವರ್ಷಗಳಿಂದ ಬೀಡು ಬಿಟ್ಟಿದ್ದಾರೆ. ಕಿರಿಯ ಅಭಿಯಂತರ ನವೀನ್ ಕುಮಾರ್ (12 ವರ್ಷ), ಅಧೀಕ್ಷಕ ಮಲ್ಲಿಕಾರ್ಜುನ (9 ವರ್ಷ), ಪ್ರಥಮ ದರ್ಜೆ ಸಹಾಯಕ ಹರೀಶ ಬಿ.ಜಿ. (18 ವರ್ಷ), ಪ್ರಥಮ ದರ್ಜೆ ಸಹಾಯಕಿ ತ್ರಿವೇಣಿ ಬಸವರಾಜ (9 ವರ್ಷ), ದ್ವಿತಿಯ ದರ್ಜೆ ಸಹಾಯಕಿ ಸುಕನ್ಯಾ ಹೊಸಮನಿ (5 ವರ್ಷ), ಭೂ ವಿಜ್ಞಾನಿಗಳಾದ ಸನಿತ್ ಸಿ. (3 ವರ್ಷ), ನಾಗರಾಜ ಈ. (2 ವರ್ಷ), ಕಿರಿಯ ಅಭಿಯಂತರರಾದ ಸಂಪ್ರಿತಾ ಹಿರೇಮಠ 3 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲರೂ ಭ್ರಷ್ಟಾಚಾರಕ್ಕೆ ಸಹಕಾರ ನೀಡುತ್ತಿದ್ದಾರೆಂದು ದೂರುಗಳು ಸಲ್ಲಿಕೆಯಾಗಿವೆ. ಇನ್ನು ಕಳೆದ ಐದು ತಿಂಗಳ ಹಿಂದೆ ಹಿರಿಯ ಭೂವಿಜ್ಞಾನಿಯಾಗಿ ಬಂದಿರುವ ಪುಷ್ಪಲತಾ ಕವಲೂರು ಅವರು ನಿಯಮಾವಳಿ ಪಾಲಿಸಿದ ಕಾರಣ ಕ್ರಮಕ್ಕೆ ಪತ್ರ ಬರೆಯಲಾಗಿದೆ.
ಗಣಿಗಾರಿಕೆ ಅಕ್ರಮ ಕುರಿತು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸಿಎಂಗೆ ಪತ್ರ ಬರೆದಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕೊಪ್ಪಳದಲ್ಲಿ 85 ಕಿ.ಮೀ. ತುಂಗಭದ್ರಾ ನದಿ ಹರಿಯುತ್ತಿದ್ದು, ಅಪಾರ ಮರಳು ಗಣಿ ಇದೆ. ನಿತ್ಯ 100&150 ಟ್ರಿಪ್ ಮರಳು, ಜಲ್ಲಿ ನೆರೆ ಜಿಲ್ಲೆಗಳಿಗೆ ಅನಧಿಕೃತವಾಗಿ ಸಾಗುತ್ತಿವೆ. ಇದರಿಂದ ಸರ್ಕಾರಕ್ಕೆ ಅಪಾರ ರಾಜಧನ ನಷ್ಟವಾಗುತ್ತಿದೆ. ಇಲಾಖೆ ಅಧಿಕಾರಿಗಳು ಶಾಮೀಲಾಗಿ ಭ್ರಷ್ಟಾಚಾರ ನಡೆಸುತ್ತಿರುವ ಬಗ್ಗೆ ದೂರು ಸಲ್ಲಿಕೆಯಾಗಿವೆ.
200ಕ್ಕೂ ಹೆಚ್ಚು ಜನ ಮರಳು ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಿ ಕ್ರಮ ಕೈಗೊಳ್ಳಬೇಕು. ಕಾನೂನು ಅರಿವು ಇಲ್ಲದೇ ಕೆಳ ಹಂತದ ಅಧಿಕಾರಿಗಳ ಮಾತಿನಂತೆ ಅಕ್ರಮ ದಂಧೆಗೆ ಸಹಕರಿಸುತ್ತಿರುವ ಹಿರಿಯ ಭೂ ವಿಜ್ಞಾನಿ ಪುಷ್ಪಲತಾ ಸೇರಿ ಇತರ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.















