ನಿಷ್ಕ್ರಿಯ ದಯಾಮರಣಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ರೂಪಿಸಲು ಅನುವಾಗುವಂತೆ ಕೇಂದ್ರ ಸರ್ಕಾರವು ಕಾನೂನನ್ನು ರೂಪಿಸದೆ ಪ್ರಕರಣವನ್ನು ನ್ಯಾಯಿಕ ವೇದಿಕೆ ವರ್ಗಾಯಿಸುತ್ತಿದೆ ಎಂದು ಗುರುವಾರ ಸುಪ್ರೀಂ ಕೋರ್ಟ್ ಹೇಳಿದೆ .
[ಕಾಮನ್ ಕಾಸ್ ವರ್ಸಸ್ ಭಾರತ ಸರ್ಕಾರ].
ನಿಷ್ಕ್ರಿಯ ದಯಾಮರಣ ಮತ್ತು ಘನತೆಯಿಂದ ಸಾಯುವ ಹಕ್ಕಿನ ನಿರ್ವಹಣೆಗೆ ಇರುವ ನಿಯಮಾವಳಿಗಳ ಕೊರತೆಗೆ ಸಂಬಂಧಿಸಿದಂತೆ ಜನವರಿ 24ರಂದು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ ಟಿ ರವಿಕುಮಾರ್ ಅವರ ನೇತೃತ್ವದ ಸಾಂವಿಧಾನಿಕ ಪೀಠವು ಆದೇಶ ಮಾಡುವ ಸಾಧ್ಯತೆ ಇದೆ.
ನಿಷ್ಕ್ರಿಯ ದಯಾಮರಣಕ್ಕೆ ವಿವಿಧ ವೈದ್ಯಕೀಯ ಮಂಡಳಿಯ ಒಪ್ಪಿಗೆ ನೀಡುವ ಅಗತ್ಯತೆ ಮತ್ತು ಇದಕ್ಕೆ ಸಮ್ಮತಿಸಿದರೆ ದುರ್ಬಳಕೆ ಕುರಿತು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಅವರಿಗೆ ನ್ಯಾಯಮೂರ್ತಿ ಜೋಸೆಫ್ ಗುರುವಾರ ಹೀಗೆ ಹೇಳಿದರು:
“ಒಂದು ವಿಚಾರ ಅರ್ಥ ಮಾಡಿಕೊಳ್ಳಿ. ಈ ಕ್ಷೇತ್ರಗಳು ಶಾಸನಸಭೆ ಅಧಿಕಾರಕ್ಕೆ ಒಳಪಟ್ಟಿರುವಂತಹವು. ಆದರೆ, ಅದು (ಶಾಸನಸಭೆ) ಇದನ್ನು ಮಾಡುತ್ತಿಲ್ಲ. ಈ ನ್ಯಾಯಾಲಯದ ನಿರ್ದೇಶನದಂತೆ ನೀವು ಜವಾಬ್ದಾರಿ ವರ್ಗಾಯಿಸುತ್ತಿದ್ದೀರಿ. ಇದನ್ನು ನೀವು ಸಂಪೂರ್ಣವಾಗಿ ನಿಯಂತ್ರಿಸಬೇಕು. ನಿಮಗೆ ಹೆಚ್ಚಿನ ಜ್ಞಾನವಿದೆ. ನೀವು [ಕೇಂದ್ರ] ಒದಗಿಸಿರುವುದಕ್ಕಿಂತ ಹೆಚ್ಚಿನದನ್ನು ನಾವು ಹೊಂದಿಲ್ಲ” ಎಂದರು.
ಕೇಂದ್ರ ಸರ್ಕಾರವು ಈ ಕುರಿತು ವಿಸ್ತೃತವಾಗಿ ಚರ್ಚಿಸಿದ್ದು, ನಿರ್ದಿಷ್ಟವಾಗಿ ಕಾನೂನು ರೂಪಿಸದಿರಲು ನಿರ್ಧರಿಸಿದೆ. ಈ ವಿಷಯದ ಕುರಿತು ಸುಪ್ರೀಂ ಕೋರ್ಟ್’ನ ಹಿಂದಿನ ತೀರ್ಪಿನಿಂದ ಸರ್ಕಾರವು ತೊಂದರೆಗೀಡಾಗಿಲ್ಲ ಎಂದು ಎಎಸ್ಜಿ ಹೇಳಿದರು.
ನ್ಯಾಯಮೂರ್ತಿ ರಸ್ತೋಗಿ ಅವರು “ಅರ್ಜಿದಾರರು ಅಸ್ತಿತ್ವದಲ್ಲಿರುವ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳನ್ನು ಕಾರ್ಯಗತಗೊಳಿಸಬೇಕೆಂದು ಬಯಸುತ್ತಾರೆ” ಎಂದು ಬೆರಳು ಮಾಡಿದರು.
ಸುಪ್ರೀಂ ಕೋರ್ಟ್’ನ ಸಾಂವಿಧಾನಿಕ ಪೀಠವು 2018ರಲ್ಲಿ ನಿಷ್ಕ್ರಿಯ ದಯಾಮರಣದ ಅಗತ್ಯತೆಯನ್ನು ಮನಗಂಡು ಅದಕ್ಕೆ ಅನುಮತಿಯನ್ನು ನೀಡಿತ್ತು. ಅಲ್ಲದೆ, ಬದುಕಿದ್ದಾಗಲೇ ದಯಾಮರಣಕ್ಕೆ ಸಮ್ಮತಿಸುವ ಜೀವಂತ ಉಯಿಲು/ಮುಂಚಿತವಾದ ನಿರ್ದೇಶನಗಳನ್ನು ನೀಡಲು ಅನುಮತಿಸಿತ್ತು.
ಆ ಕುರಿತಾದ ತೀರ್ಪಿನಲ್ಲಿ ಸಾಂವಿಧಾನಿಕ ಪೀಠವು ಸಂವಿಧಾನದ 21ನೇ ವಿಧಿಯು ಘನತೆಯ ಜೀವಿಸುವ ಹಕ್ಕನ್ನು ಒಳಗೊಂಡಿದ್ದು ಅದರಲ್ಲಿಯೇ ಗುಣಮುಖವಾಗದ ಮಾರಣಾಂತಿಕ ಖಾಯಿಲೆಯಿಂದ ಬಳಲುವ ರೋಗಿಗಳು ಅಥವಾ ನಿಷ್ಕ್ರಿಯ ಸ್ಥಿತಿಯಲ್ಲಿ ಜೀವಂತ ಶವವಾಗಿರುವ ವ್ಯಕ್ತಿಗಳ ಪ್ರಕರಣದಲ್ಲಿ ಸಾಯುವ ಪ್ರಕ್ರಿಯೆಯನ್ನು ಸುಗಮಗೊಳಿಸುವ ಅಂಶವೂ ಸೇರಿದೆ ಎಂದಿತ್ತು.