ಮಹಿಳಾ ಹೌಸ್ ಕೀಪರ್ ಹುದ್ದೆಗೆ ತೃತೀಯ ಲಿಂಗಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ತಾತ್ಕಾಲಿಕವಾಗಿ ಸ್ವೀಕರಿಸುವಂತೆ ಕೇರಳದ ಲೋಕಸೇವಾ ಆಯೋಗಕ್ಕೆ (ಪಿಎಸ್ ಸಿ) ನಿರ್ದೇಶಿಸಿದ್ದ ಕೇರಳ ಆಡಳಿತಾತ್ಮಕ ನ್ಯಾಯಮಂಡಳಿಯ ಮಧ್ಯಂತರ ಆದೇಶವನ್ನು ಕೇರಳ ಹೈಕೋರ್ಟ್ ಇತ್ತೀಚೆಗೆ ಎತ್ತಿಹಿಡಿದಿದೆ .
[ಕೇರಳ ಲೋಕಸೇವಾ ಆಯೋಗ ಮತ್ತು ಅನೀರಾ ಕಬೀರ್ ನಡುವಣ ಪ್ರಕರಣ].
ನ್ಯಾಯಾಧಿಕರಣದ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ನ್ಯಾಯಮೂರ್ತಿ ಅಲೆಕ್ಸಾಂಡರ್ ಥಾಮಸ್ ಮತ್ತು ಸಿ ಜಯಚಂದ್ರನ್ ಅವರಿದ್ದ ವಿಭಾಗೀಯ ಪೀಠ ಇತ್ಯ್ರರ್ಥವಾಗುವ ಹೊತ್ತಿಗೆ ಪ್ರಕರಣ ಅಪ್ರಸ್ತುತವಾಗದಂತೆ ನೋಡಿಕೊಳ್ಳುವುದಷ್ಟೇ ನ್ಯಾಯಾಲಯದ ಉದ್ದೇಶ ಎಂದು ತಿಳಿಸಿತು.
ಪ್ರಕರಣದ ಪ್ರತಿವಾದಿಯಾಗಿರುವ ಲಿಂಗಪರಿವರ್ತಿತ ಮಹಿಳೆ (ಜನ್ಮತಃ ಪುರುಷನಾಗಿದ್ದು ಬಳಿಕ ಮಹಿಳೆ ಎಂದು ಗುರುತಿಸಿಕೊಂಡವರು) ಅನೀರಾ ಕಬೀರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ವಿಭಾಗದಡಿ ಮಹಿಳಾ ಹೌಸ್ ಕೀಪರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಹುದ್ದೆ ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಇದ್ದು ಲಿಂಗಪರಿವರ್ತಿತ ಮಹಿಳೆಯರಿಗೆ ಅವಕಾಶ ನೀಡರಲಿಲ್ಲ. ಈ ಹಿನ್ನೆಲೆಯಲ್ಲಿ ಕೆಎಟಿ ಮೊರೆ ಹೋಗಿದ್ದ ಅವರು ಅಧಿಸೂಚಿತ ಹುದ್ದೆಯ ವ್ಯಾಪ್ತಿಯಿಂದ ಲಿಂಗಪರಿವರ್ತಿತ ಮಹಿಳೆಯರನ್ನು ಹೊರಗಿಡುವುದು ಅನ್ಯಾಯ, ಕಾನೂನುಬಾಹಿರ, ಮನಸೋ ಇಚ್ಛೆಯಿಂದ ಕೂಡಿದ್ದು ತನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ದೂರಿದ್ದರು.
ಕೇರಳ ಲೋಕಸೇವಾ ಆಯೋಗಕ್ಕೆ (ಕೆಪಿಎಸ್ಸಿ) ಅರ್ಜಿ ಸಲ್ಲಿಸಲು ಲಿಂಗಪರಿವರ್ತಿತ ಮಹಿಳೆಗೆ ಈ ವರ್ಷದ ಜನವರಿಯಲ್ಲಿ ಅವಕಾಶ ಮಾಡಿಕೊಟ್ಟಿದ್ದ ನ್ಯಾಯಮೂರ್ತಿ ಪಿ ವಿ ಆಶಾ ಮತ್ತು ನ್ಯಾಯಮಂಡಳಿಯ ಆಡಳಿತಾತ್ಮಕ ಸದಸ್ಯ ರಾಜೇಶ್ ದಿವಾನ್ ಅವರಿದ್ದ ಪೀಠ ಅರ್ಜಿಯನ್ನು ತಾತ್ಕಾಲಿಕವಾಗಿ ಮತ್ತು ಮುಂದಿನ ಆದೇಶಗಳಿಗೆ ಒಳಪಟ್ಟು ಪ್ರಕ್ರಿಯೆಗೊಳಿಸಲು ನಿರ್ದೇಶಿಸಿತ್ತು. ಆನ್ಲೈನ್ ಅರ್ಜಿ ಪುಟದಲ್ಲಿ ಟ್ರಾನ್ಸ್ಜೆಂಡರ್ ಮಹಿಳೆಯನ್ನು ಆಯ್ಕೆ ಮಾಡಲು ಯಾವುದೇ ಆಯ್ಕೆಯಿಲ್ಲದ ಕಾರಣ ಭೌತಿಕ ರೂಪದಲ್ಲಿ ಅರ್ಜಿ ಸಲ್ಲಿಸಲು ನ್ಯಾಯಮಂಡಳಿ ಅವಕಾಶ ನೀಡಿತ್ತು.
ಇದನ್ನು ಪ್ರಶ್ನಿಸಿ ಪಿಎಸ್ಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ ಪ್ರಕರಣ ಅರ್ಥಹೀನವಾಗದಂತೆ ನೋಡಿಕೊಳ್ಳುವುದಕ್ಕಾಗಿ ನ್ಯಾಯಮಂಡಳಿ ಮಧ್ಯಂತರ ಆದೇಶ ನೀಡಿದೆ ಎಂಬುದನ್ನು ಹೈಕೋರ್ಟ್ ಗಮನಿಸಿತು. ಆದರೆ ಮಧ್ಯಂತರ ಹಂತದಲ್ಲಿ ಪಿಎಸ್ಸಿಯ ವಾದವನ್ನು ನ್ಯಾಯಮಂಡಳಿ ಆಲಿಸಲಿದೆ ಎಂದು ಪಿಎಸ್ಸಿಗೆ ಅದು ಒಪ್ಪಿಗೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ನ್ಯಾಯಮಂಡಳಿಯ ಮಧ್ಯಂತರ ಆದೇಶದಲ್ಲಿ ಮಧ್ಯಪ್ರವೇಶಿಸದೆ ಇರಲು ಹೈಕೋರ್ಟ್ ನಿರ್ಧರಿಸಿತು. ಆದರೆ ಪ್ರಕರಣವನ್ನು ತ್ವರಿತವಾಗಿ ಆಲಿಸಿ ಮೂರು ತಿಂಗಳೊಳಗೆ ವಿಲೇವಾರಿ ಮಾಡುವಂತೆ ಅದು ನ್ಯಾಯಮಂಡಳಿಗೆ ಸೂಚಿಸಿತು.