ಬೆಂಗಳೂರು : ಹಿಂದುಸ್ತಾನಿ, ಹಿಂದೂ ರಾಷ್ಟ್ರ ಅನ್ನೋ ಸಂಘದ ನಿಲುವು ಎಂದಿಗೂ ಬದಲಾಗುವುದಿಲ್ಲ. ಸಂಘಕ್ಕೆ ತೃತೀಯಲಿಂಗಿಗಳೂ ಬರಬಹುದು ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಕರೆ ನೀಡಿದರು.
ಹೊಸಕೆರೆಹಳ್ಳಿ ಖಾಸಗಿ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘದಲ್ಲಿ 3,700ಕ್ಕೂ ಹೆಚ್ಚು ಪ್ರಚಾರಕರಿದ್ದಾರೆ, 6 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರಿದ್ದಾರೆ. ಪ್ರತಿ ವರ್ಷ 350ಕ್ಕೂ ಹೆಚ್ಚು ಜನ ಸೇರ್ಪಡೆ ಆಗ್ತಿದ್ದಾರೆ. ಸಂಘದಿಂದ ಯಾರಿಗೂ ಯಾವುದೇ ನಿರೀಕ್ಷೆ ಇರಬಾರದು. ಜಾತಿ, ಧರ್ಮಗಳ ಹೆಸರದಲ್ಲಿ ಸಂಘ ಏನೂ ಮಾಡುವುದಿಲ್ಲ. ತೃತೀಯಲಿಂಗಿಗಳೂ ಕೂಡ ಸಂಘಕ್ಕೆ ಸೇರಬಹುದಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಭಾರತ-ಪಾಕ್ ನಡುವಿನ ಸಂಘರ್ಷದ ಕುರಿತು ಮಾತನಾಡಿ, ಭಾರತ ಯಾವಾಗಲೂ ಪಾಕಿಸ್ತಾನದ ಜೊತೆಗೂ ಶಾಂತಿಯನ್ನೇ ಬಯಸುತ್ತೆ. ಆದರೆ ಪಾಕಿಸ್ತಾನ ಶಾಂತಿಯನ್ನ ಬಯಸಲ್ಲ. ಆದ್ದರಿಂದ ನಾವು ಅವರದ್ದೇ ಭಾಷೆಯಲ್ಲಿ ಅರ್ಥ ಮಾಡಿಸಬೇಕಾಗುತ್ತೆ. ಮುಂದೊಂದುದಿನ ಅವರಿಗೆ ಅರ್ಥವಾಗುತ್ತೆ ಎಂದು ಹೇಳಿದರು.
ಸಂಘದಲ್ಲಿ ಜಾತಿ, ಲಿಂಗ, ಮುಸ್ಲಿಂ, ಕ್ರೈಸ್ತ, ಬ್ರಾಹ್ಮಣ, ಶೈವ ಎಂಬ ಪಂಥಗಳಿಗೆ ಅವಕಾಶ ಇಲ್ಲ. ಯಾವುದೇ ಧರ್ಮದವರು ಶಾಖೆಗೆ ಬರಬಹುದು. ಆದರೆ ಶಾಖೆಗೆ ಬರುವವರು ತಮ್ಮ ಧರ್ಮವನ್ನು ಹೊರಗಿಟ್ಟು, ಭಾರತ ಮಾತೆಯ ಮಕ್ಕಳಾಗಿ ಬರಬೇಕು.
ʼಮೆಂಬರ್ ಆಫ್ ದಿ ಹಿಂದೂ ಸೊಸೈಟಿ’ ಅಡಿಯಲ್ಲಿ ಮುಸ್ಲಿಂ, ಕ್ರೈಸ್ತ ಯಾರು ಬೇಕಾದರೂ ಶಾಖೆಗೆ ಬರಬಹುದು. ನೀವು ಹಿಂದೂ ಸಮಾಜವನ್ನು ಒಪ್ಪಿಕೊಂಡು ಶಾಖೆಗೆ ಬರಬೇಕು. ನೀವು ಯಾವ ಧರ್ಮದವರು ಅಂತಾನು ನಾವು ಕೇಳುವುದಿಲ್ಲ ಎಂದು ಹೇಳಿದರು.
ಈ ಪ್ರಶ್ನೆ ಬರುವುದು ಹೊಸದೆನಲ್ಲ. ಸಾಕಷ್ಟು ಬಾರಿ ಈ ಪ್ರಶ್ನೆಗೆ ನಾವು ಉತ್ತರ ನೀಡಿದ್ದೇವೆ. ಆರ್‌ಎಸ್‌ಎಸ್ ಸ್ಥಾಪನೆಯಾಗಿದ್ದು 1925ರಲ್ಲಿ. ಆಗ ಭಾರತನ್ನು ಬ್ರಿಟಿಷರು ಆಳುತ್ತಿದ್ದರು. ನಾವು ಅವರ ಹತ್ತಿರ ಸಂಘವನ್ನು ನೋಂದಣಿ ಮಾಡಿಕೊಳ್ಳಬೇಕಿತ್ತಾ? ನಾವು ಬ್ರಿಟಿಷರ ಹತ್ತಿರ ಸಂಘವನ್ನು ನೋಂದಣಿ ಮಾಡಿಸಲು ನೀವು ನಿರೀಕ್ಷೆ ಮಾಡುತ್ತೀರಾ? ನಮ್ಮ ಹೋರಾಟ ಬ್ರಿಟಿಷರ ವಿರುದ್ಧ ಇತ್ತು. ಸ್ವಾತಂತ್ರ‍್ಯ ಬಂದ ನಂತರವೂ ಸಂಘಗಳನ್ನು ನೋಂದಣಿ ಮಾಡಬೇಕೆಂದು ಕಡ್ಡಾಯವಿಲ್ಲ. ನಮ್ಮದು ಸ್ವತಂತ್ರ ಹಾಗೂ ಕಾನೂನಾತ್ಮಕ ಸಂಘ. ನಮ್ಮದು ಗುರುತಿಸಲ್ಪಡುವ ಸಂಘ. ಆರ್‌ಎಸ್‌ಎಸ್ ಆದಾಯ ತೆರಿಗೆ ಪಾವತಿಸುತ್ತಿದೆ.
ಗುರುದಕ್ಷಿಣೆ ಹೊರತಾಗಿ ಆದಾಯ ತೆರಿಗೆ ಇಲಾಖೆ, ನಮಗೆ ಟ್ಯಾಕ್ಸ್ ಕಟ್ಟಲು ಸಹ ಹೇಳಿದೆ. ನಮ್ಮನ್ನು ಮೂರು ಬಾರಿ ನಿಷೇಧಿಸಲು ಪ್ರಯತ್ನ ನಡೆದಿದೆ. ನಿಷೇಧ ಮಾಡುವ ಮೂಲಕ ಸರ್ಕಾರ ನಮ್ಮನ್ನು ಗುರುತಿಸಿದೆ. ಆದರೆ ಕೋರ್ಟ್ ಈ ನಿಷೇಧವನ್ನು ತಿರಸ್ಕರಿಸಿದೆ. ನಮ್ಮದು ಸಂವಿಧಾನಾತ್ಮಕ ಸಂಘ. ಅದಕ್ಕಾಗಿ ನಮ್ಮ ಸಂಘವನ್ನು ನೋಂದಣಿ ಮಾಡಿಲ್ಲ. ಹಿಂದೂ ಧರ್ಮ ಕೂಡ ನೋಂದಣಿಯಾಗಿಲ್ಲ ಎಂದು ಉತ್ತರಿಸಿದರು.














