ಮನೆ ರಾಜ್ಯ ದೇವರ ದಾಸಿಮಯ್ಯ ಪುಣ್ಯಕ್ಷೇತ್ರದಲ್ಲಿ ಸಂಪತ್ತು – ಲಕ್ಕುಂಡಿಯಂತೆ ಯಾದಗಿರಿಯಲ್ಲೂ ಉತ್ಖನನ..!

ದೇವರ ದಾಸಿಮಯ್ಯ ಪುಣ್ಯಕ್ಷೇತ್ರದಲ್ಲಿ ಸಂಪತ್ತು – ಲಕ್ಕುಂಡಿಯಂತೆ ಯಾದಗಿರಿಯಲ್ಲೂ ಉತ್ಖನನ..!

0

ಯಾದಗಿರಿ : ಗದಗದ ಐತಿಹಾಸಿಕ ಲಕ್ಕುಂಡಿಯಲ್ಲಿ ಕಳೆದ 8 ದಿನಗಳಿಂದ ಉತ್ಖನನ ನಡೆಯುತ್ತಿದೆ. ಇದೀಗ ಅದೇ ರೀತಿ ದೇವರ ದಾಸಿಮಯ್ಯ ಪುಣ್ಯಕ್ಷೇತ್ರ ಯಾದಗಿರಿಯ ಮುದನೂರು (ಬಿ) ಗ್ರಾಮದಲ್ಲಿಯೂ ಉತ್ಖನನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮುದನೂರು (ಬಿ) ಗ್ರಾಮ ಹಿಂದಿನ ಕಾಲದಲ್ಲಿ ವಾಣಿಜ್ಯ ಕೇಂದ್ರವಾಗಿ ನಂತರ ಈಗ ಪುಣ್ಯಕ್ಷೇತ್ರವಾಗಿದೆ. ಅಲ್ಲಿ ಲಕ್ಕುಂಡಿಯಂತೆ ಅಪಾರ ಸಂಪತ್ತು ಇದೆ ಎನ್ನಲಾಗಿದೆ. ಜೊತೆಗೆ ಭೂಗರ್ಭದಲ್ಲಿ ಐತಿಹಾಸಿಕ ಕುರುಹುಗಳು ಇವೆ. ಲಕ್ಕುಂಡಿಯಲ್ಲಿ ಸಂಪತ್ತು ದೊರೆತ ನಂತರ ಈ ಧಾರ್ಮಿಕ ಕ್ಷೇತ್ರದಲ್ಲಿ ಉತ್ಖನನ ಮಾಡುವಂತೆ ಬೇಡಿಕೆ ಕೇಳಿಬಂದಿದೆ.

ಗದಗ ಜಿಲ್ಲೆಯ ಲಕ್ಕುಂಡಿಯ ಭೂಗರ್ಭದಲ್ಲಿ ಸಂಪತ್ತು ಪತ್ತೆಯಾದ ನಂತರ ಉತ್ಖನನ ನಡೆಯುತ್ತಿದೆ. ಲಕ್ಕುಂಡಿಯನ್ನು ಮೀರಿಸುವಷ್ಟು ಅಪಾರ ವಜ್ರ, ಚಿನ್ನಾಭರಣ ಸೇರಿ ಅಪಾರ ಸಂಪತ್ತು ಈಗ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮುದನೂರು (ಬಿ) ಗ್ರಾಮದಲ್ಲಿ ಇದೆ ಎನ್ನಲಾಗಿದೆ. ಮುದನೂರು (ಬಿ) ಗ್ರಾಮವು ಪ್ರಥಮ ವಚನಕಾರ ದೇವರ ದಾಸಿಮಯ್ಯ ಅವರ ಪುಣ್ಯಕ್ಷೇತ್ರವಾಗಿದೆ.

ಚಾಲುಕ್ಯರ ಕಾಲಾವಧಿಯಲ್ಲಿ ಇದು ವಾಣಿಜ್ಯ ಕೇಂದ್ರವಾಗಿತಂತೆ. ಇಲ್ಲಿ ವಜ್ರ, ಚಿನ್ನಾಭರಣ ಸೇರಿ ಅಪಾರ ಸಂಪತ್ತು ಬಳಕೆಯಾಗಿತ್ತು ಎನ್ನಲಾಗಿದೆ. ನಂತರ ಕಾಲಾವಧಿಯಲ್ಲಿ ಐತಿಹಾಸಿಕ ಕುರುಹುಗಳು ಮುಚ್ಚಲ್ಪಟ್ಟಿವೆ. ದೇವರ ದಾಸಿಮಯ್ಯ ನೆಲದಲ್ಲಿ ಸುಮಾರು 101 ಶಿವಲಿಂಗ ದೇಗುಲಗಳು ಇವೆ. ಈಗಾಗಲೇ ದಾಸಿಮಯ್ಯ ದೇವಾಲಯದ ಸುತ್ತಲೂ ಶಿವಲಿಂಗದ ದೇಗುಲಗಳಿದ್ದು, ಅವು ಹಾಳು ಕೊಂಪೆಯಾಗಿವೆ.

ಶಿವಲಿಂಗ ಇರುವ ದೇವಸ್ಥಾನ ಮೇಲೆ ಮನೆ ನಿರ್ಮಾಣ ಮಾಡಿಕೊಂಡು ಜನರು ವಾಸವಾಗಿದ್ದಾರೆ. ಸುಮಾರು 160 ಮನೆಗಳು ದೇವಸ್ಥಾನ ಮೇಲೆ ಇವೆ. ಮನೆಗಳನ್ನು ಸ್ಥಳಾಂತರ ಮಾಡಿ, ಉತ್ಖನನ ಮಾಡಿದರೆ ಭೂಗರ್ಭದಲ್ಲಿಯೇ ಅಪಾರ ಸಂಪತ್ತು ದೊರೆಯುತ್ತದೆ. ಅದೇ ರೀತಿ ನೂರಾರು ದೇಗುಲಗಳ ಕುರುಹುಗಳು ಪತ್ತೆಯಾಗಲಿವೆ ಎಂದು ಗ್ರಾಮಸ್ಥರ ಮಾತಾಗಿದೆ.

ಈಗಾಗಲೇ ಜಿಲ್ಲಾಡಳಿತ 160 ಮನೆಗಳ ಸ್ಥಳಾಂತರಕ್ಕೆ ಗುರುತಿಸಿದೆ. ಕೂಡಲೇ 160 ಮನೆಗಳ ಸ್ಥಳಾಂತರ ಮಾಡಿ, ಸರ್ಕಾರ ಉತ್ಖನನ ಮಾಡಿದರೆ ಭಾರಿ ಪ್ರಮಾಣದಲ್ಲಿ ಸಂಪತ್ತು ಹಾಗೂ ಐತಿಹಾಸಿಕ ಕುರುಹುಗಳು ದೊರೆಯಲಿವೆ ಎಂದು ಜನರ ಆಗ್ರಹವಾಗಿದೆ.