ಬೆಂಗಳೂರು : ಮಾನವ-ವನ್ಯಜೀವಿ ಸಂಘರ್ಷವನ್ನು ಪ್ರಕೃತಿ ವಿಕೋಪದ ರೀತಿ ಪರಿಗಣಿಸಲು ಮತ್ತು ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಸಹಯೋಗ ಒದಗಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಅವರು, ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣೆ ಮತ್ತು ನಿಯಂತ್ರಣಕ್ಕೆ ಜಿಲ್ಲಾಮಟ್ಟದಲ್ಲಿ ಸಮನ್ವಯ ಸಮಿತಿ ರಚಿಸುವಂತೆಯೂ ಕೋರಿದರು.
ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಿದ್ದು 2022-23ರಲ್ಲಿ 57, 2023-24ರಲ್ಲಿ 65 ಮತ್ತು 2024-25ರಲ್ಲಿ 46 ಹಾಗೂ 2025-26ರಲ್ಲಿ ಇಲ್ಲಿಯವರೆಗೆ 32 ಜನರು ಮಾನವ-ವನ್ಯಜೀವಿ ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆ ಜೀವಹಾನಿ ತಪ್ಪಿಸಲು ಶಕ್ತಿಮೀರಿ ಶ್ರಮಿಸುತ್ತಿದೆ ಎಂದರು.
ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕರ್ನಾಟಕಕ್ಕಿಂತ ವನ್ಯಜೀವಿಗಳ ಸಂಖ್ಯೆ ಕಡಿಮೆ ಇದ್ದರೂ ಜೀವಹಾನಿಯ ಸಂಖ್ಯೆ ಅಧಿಕವಾಗಿದೆ ಎಂದು ಸಭೆಗೆ ವಿವರಿಸಿದರು.
ಅಕ್ಟೋಬರ್ ತಿಂಗಳಲ್ಲಿ ಹುಲಿಗಳ ದಾಳಿಯಿಂದ ಮೂರು ಸಾವುಗಳು ಸಂಭವಿಸಿ, ಒಬ್ಬರು ತೀವ್ರ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ನಾಗರಹೊಳೆ, ಬಂಡೀಪುರದಲ್ಲಿ ಸಫಾರಿ ಸ್ಥಗಿತಗೊಳಿಸಿ, ವಾಹನ ಮತ್ತು ಸಿಬ್ಬಂದಿಯನ್ನು ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಒಟ್ಟು 250 ಅಧಿಕಾರಿ ಸಿಬ್ಬಂದಿ ಈಗ 10 ಹುಲಿಗಳನ್ನು ಸೆರೆ ಹಿಡಿದಿದ್ದಾರೆ ಇಲ್ಲವೇ ರಕ್ಷಿಸಿದ್ದಾರೆ ಎಂದು ತಿಳಿಸಿದರು.
ಮಾನವ ವನ್ಯಜೀವಿ ಸಂಘರ್ಷ ನಿಯಂತ್ರಿಸಲು 8 ಅಂಶದ ಕಾರ್ಯಕ್ರಮ ರೂಪಿಸಲಾಗಿದೆ. ಸಮಗ್ರ ಕಮಾಂಡ್ ಸೆಂಟರ್ ಸ್ಥಾಪಿಸಲಾಗುತ್ತಿದೆ, ಜೊತೆಗೆ ಸ್ಥಳೀಯವಾಗಿ ಉತ್ಸಾಹಿ ಯುವಕರನ್ನು ಗುರುತಿಸಿ ಕಾಡಿನ ಮಿತ್ರ ಎಂದು ಅವರನ್ನೂ ಗಸ್ತು ಕಾರ್ಯಕ್ಕೆ ತೊಡಗಿಸಿಕೊಳ್ಳಲು ಚಿಂತಿಸಲಾಗಿದೆ ಎಂದು ತಿಳಿಸಿದರು.
ಮಾನವ-ವನ್ಯಜೀವಿ ಸಂಘರ್ಷ ಇರುವ ಪ್ರದೇಶದಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ನಿವೃತ್ತ ಯೋಧರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಅರಣ್ಯ ಇಲಾಖೆಯಲ್ಲಿ ಪಶುವೈದ್ಯಕೀಯ ಇಲಾಖೆಯಿಂದ ನಿಯೋಜನೆಯ ಮೇಲೆ ಪಶುವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ವನ್ಯಜೀವಿ ಪಶುವೈದ್ಯರ ಪ್ರತ್ಯೇಕ ಕೇಡರ್ ರೂಪಿಸುವ ಅಗತ್ಯವನ್ನು ಈಶ್ವರ ಖಂಡ್ರೆ ಪ್ರತಿಪಾದಿಸಿದರು.














