ಪಾಂಡವಪುರ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಆಗುತ್ತಿರುವ ನಿರಂತರ ಮಳೆಯಿಂದಾಗಿ ಭಾರೀ ಅನಾಹುತ ಸಂಭವಿಸಿದೆ. ಭಾರೀ ಗಾತ್ರದ ಹಳೆಯ ಮರವೊಂದು ಮುರಿದು ಬಿದ್ದು ಗ್ರಾಮದ ಪ್ರಸಿದ್ಧ ಚೆನ್ನಿಗರಾಯ ದೇವಸ್ಥಾನದ ಮೇಲೆ ಬಿದ್ದ ಪರಿಣಾಮ, ದೇವಾಲಯದ ಗೋಪುರ ಹಾಗೂ ಒಳಗಿರುವ ಪ್ರಮುಖ ವಿಗ್ರಹಗಳಿಗೆ ಭಾರಿ ಹಾನಿಯಾಗಿದೆ.
ಮಳೆಯಿಂದಾಗಿ ನೆನೆಸಿದ ನೆಲದಲ್ಲಿ ಮರ ಬಿದ್ದು ಧರೆಗುರುಳಿದ್ದು, ನೂರಾರು ವರ್ಷಗಳ ಇತಿಹಾಸವಿರುವ ಈ ದೇವಾಲಯದ ಪವಿತ್ರತೆಯ ಮೇಲೆ ಪರಿಣಾಮ ಬೀರಿದೆ. ಇತ್ತೀಚೆಗಷ್ಟೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾದ ಈ ದೇವಾಲಯ ಈಗ ಮತ್ತೆ ಹಾನಿಗೆ ಒಳಗಾಗಿದೆ. ಲಕ್ಷಾಂತರ ರೂ. ನಷ್ಟವಾಗಿದೆ. ಗೋಪುರದ ಭಾಗ ಮುರಿದು ಬಿದ್ದಿದ್ದು, ದೇವಾಲಯದ ಒಳಗೆ ಸ್ಥಾಪಿತವಾಗಿದ್ದ ವಿಗ್ರಹಕ್ಕೂ ಸಣ್ಣಪುಟ್ಟ ಹಾನಿಯಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಈ ದುರ್ಘಟನೆ ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ. ಕೆಲ ಗ್ರಾಮಸ್ಥರು ಇದನ್ನು ಕೆಟ್ಟ ಮುನ್ಸೂಚನೆ ಎಂದು ಭಾವಿಸುತ್ತಿದ್ದಾರೆ. ದೇವಾಲಯದ ಆಡಳಿತ ಸಮಿತಿ ಹಾಗೂ ಗ್ರಾಮಸ್ಥರು ತಕ್ಷಣ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.














