ರಾಜಧಾನಿ ದೆಹಲಿಯ ಜನರು ಸಾಹಸಮಯ ಚಟುವಟಿಕೆಗಳನ್ನು ಸಾಕಷ್ಟು ಎಂಜಾಯ್ ಮಾಡುತ್ತಾರೆ. ಹೇಗೆ ಅಂತ ಕೇಳ್ತಾ ಇದ್ದೀರಾ? ದೆಹಲಿಯ ಆಸುಪಾಸಿನಲ್ಲಿ ಸವಾಲೊಡ್ಡುವ ಅದ್ಭುತವಾದ ತಾಣಗಳಿವೆ.
ಅಲ್ಲಿ ಕ್ಯಾಂಪಿಂಗ್, ಟ್ರೆಕ್ಕಿಂಗ್, ರಾಕ್ ಕ್ಲೈಂಬಿಂಗ್ ನಂತಹ ಚಟುವಟಿಕೆಗಳನ್ನು ಅಂತ್ಯವಿಲ್ಲದೇ ಸ್ನೇಹಿತರೊಂದಿಗೆ ಆನಂದಿಸಬಹುದು. ಅಷ್ಟಕ್ಕೂ ದೆಹಲಿಯ ಮಂದಿ ವಾರಾಂತ್ಯದ ಸಮಯದಲ್ಲಿ ಎಂತಹ ಸಾಹಸಮಯ ತಾಣಗಳಿಗೆ ಹೋಗುತ್ತಾರೆ ಎಂಬದನ್ನು ಇಲ್ಲಿ ತಿಳಿಯಿರಿ.
ಟ್ರಯಂಡ್ ಟ್ರೆಕ್
ದೆಹಲಿಯ ಮಂದಿ ಟ್ರಯಂಡ್ ಟ್ರೆಕ್ ಕೈಗೊಳ್ಳಲು ಹೆಚ್ಚು ಆಸಕ್ತಿ ತೋರಿಸುತ್ತಾರೆ. ಏಕೆಂದರೆ ಇದೊಂದು ಮಧ್ಯಮ ಕಷ್ಟದ ಚಾರಣವಾಗಿದೆ. ಅಷ್ಟೇ ಅಲ್ಲ, 3 ರಿಂದ 4 ಗಂಟೆಗಳ ಕಾಲ ಟ್ರೆಕ್ಕಿಂಗ್ ಪೂರ್ತಿಗೊಳಿಸಬಹುದು. ಹಿಮದಿಂದ ಆವೃತವಾದ ಪರ್ವತಗಳ ಅದ್ಭುತ ನೋಟಗಳನ್ನು ಕಣ್ತುಂಬಿಕೊಳ್ಳಲು ಪ್ರಕೃತಿ ಪ್ರೇಮಿಗಳು ಬಯಸುತ್ತಾರೆ. ಧರ್ಮಶಾಲಾದ ಧೌಲಾಧರ್ ಶ್ರೇಣಿಯ ಮಡಿಲಲ್ಲಿ ಈ ತಾಣವಿದೆ. ವರ್ಷದ ಯಾವುದೇ ಸಮಯದಲ್ಲಿಯಾದರು ಟ್ರೆಕ್ಕಿಂಗ್ ಮಾಡಬಹುದಾದರೂ ಮೇ, ಜೂನ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಟ್ರೆಕ್ಕಿಂಗ್ ಯೋಜಿಸುವುದು ಬೆಸ್ಟ್.
ನಾಗ್ ಟಿಬ್ಬಾ
ದೆಹಲಿ ಸಾಹಸಿಗಳ ಮತ್ತೊಂದು ಫೇವರೆಟ್ ತಾಣವೆಂದರೆ ಅದು ನಾಗ್ ಟಿಬ್ಬಾ. ಈ ತಾಣದ ಟ್ರೆಕ್ಕಿಂಗ್ ಪೂರ್ತಿಗೊಳಿಸಲು ಸುಮಾರು 5 ರಿಂದ 6 ಗಂಟೆಗಳು ಬೇಕಾಗುತ್ತದೆ. ಚಾರಣದ ಹುಮ್ಮಸ್ಸನ್ನು ಈ ತಾಣವು ಒದಗಿಸುತ್ತದೆ. ಇಲ್ಲಿ ನೀವು ಓಕ್ ಮತ್ತು ದೇವದಾರು ವೃಕ್ಷಗಳನ್ನು ಹೊಂದಿರುವ ದಟ್ಟವಾದ ಕಾಡನ್ನು ನೋಡಬಹುದು. ನಿಮ್ಮ ಚಾರಣ ಆ ಆಹ್ಲಾದಕರವಾದ ಹಾದಿಯಲ್ಲಿಯೇ ಹಾದು ಹೋಗುತ್ತದೆ ಎಂಬುದನ್ನು ಮರೆಯದಿರಿ. ಚಾರಣದ ತುದಿಯಲ್ಲಿ ಕೇದಾರನಾಥ ಶಿಖರ, ಹಿಮದಿಂದ ಆವೃತವಾದ ಬಂದರ್ಪೂಂಚ್ ಶಿಖರ ಮತ್ತು ಗಂಗೋತ್ರಿ ಶಿಖರಗಳ ಸುಂದರವಾದ ನೋಟಗಳು ಕಣ್ತುಂಬಿಕೊಳ್ಳುತ್ತೀರಿ.
ಖೀರ್ ಗಂಗಾ ಟ್ರೆಕ್
ಮಧ್ಯಮ ಕಷ್ಟದ ಈ ಖೀರ್ ಗಂಗಾ ಟ್ರೆಕ್ ದೆಹಲಿ ಜನರ ಹೃದಯವನ್ನು ಸ್ಪರ್ಶಿಸಿದೆ. ಹಿಮಾಚಲ ಪ್ರದೇಶದ ಜನಪ್ರಿಯ ಚಾರಣಗಳಲ್ಲಿ ಇದು ಒಂದಾಗಿದೆ ಎಂದು ನಾವು ನಿಮಗೆ ಹೇಳಲೇಬೇಕು. ಪಾರ್ವತಿ ಕಣಿವೆಯಲ್ಲಿರುವ ಈ ಸುಂದರ ತಾಣವು, ಸಮುದ್ರ ಮಟ್ಟದಿಂದ ಸರಿಸುಮಾರು 2950 ಮೀ ಎತ್ತರದಲ್ಲಿದೆ. ಬಿಸಿನೀರಿನ ಬುಗ್ಗೆಗಳು ಮತ್ತು ಅದ್ಭುತ ಕಣಿವೆಯ ನೋಟಗಳನ್ನು ಚಾರಣದ ಸಮಯದಲ್ಲಿ ನೋಡುತ್ತೀರಿ. ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಲು ನೀವು ಬಯಸಿದರೆ ಬಹುಶಃ ಈ ತಾಣ ನಿಮ್ಮನ್ನು ಮಂತ್ರಮುಗ್ಧಗೊಳಿಸಬಹುದು.
ಚೋಪ್ತ ಚಂದ್ರಶಿಲಾ
ಸುಮಾರು 8 ಕಿ.ಮೀ ಚಾರಣವನ್ನು ಹೊಂದಿರುವ ಈ ಚೋಪ್ತ ಚಂದ್ರಶಿಲಾ ಚಾರಣ ಸಾಹಸಿಗಳ ನೆನಪಿನಲ್ಲಿ ಉಳಿದು ಬಿಡುತ್ತದೆ. ವಾಸ್ತವವಾಗಿ, ಇದು ಗರ್ವಾಲ್ ಹಿಮಾಲಯ ಪ್ರದೇಶದ ಅತ್ಯಂತ ಸುಂದರವಾದ ಚಾರಣಗ ತಾಣಗಳಲ್ಲಿ ಒಂದಾಗಿದೆ. ಸುಸಜ್ಜಿತವಾದ ಹಾದಿಗಳು, ಹಚ್ಚ ಹಸಿರಿನ ಹುಲ್ಲುಗಾವಲುಗಳನ್ನು ಆಸ್ವಾದಿಸುತ್ತಾ ಚಾರಣ ಮಾಡಬಹುದು.
ಶಿಖರವನ್ನು ತಲುಪಿದ ನಂತರ ತ್ರಿಶೂಲ್, ನಂದಾ ದೇವಿ, ಕೇದಾರನಾಥ, ಬಂದರ್ಪಂಚ್ ಮತ್ತು ಚೌಖಂಬ ಸೇರಿದಂತೆ ಹಿಮಾಲಯದ ಅತ್ಯುನ್ನತ ಶಿಖರಗಳ ಅದ್ಭುತ ನೋಟವನ್ನು ನೀವು ಆನಂದಿಸಬಹುದು.
ಪ್ರಶಾರ್ ಲೇಕ್ ಟ್ರೆಕ್
ಧೌಲಾಧರ್, ಪಿರ್ ಪಂಜಾಲ್ ಮತ್ತು ಕಿನ್ನೌರ್ ಪರ್ವತ ಶ್ರೇಣಿಗಳ 180-ಡಿಗ್ರಿ ವೀಕ್ಷಣೆಗಳನ್ನು ಈ ಪ್ರಶಾರ್ ಲೇಕ್ನ ತುದಿಯಲ್ಲಿ ನಿಂತು ವೀಕ್ಷಿಸಬಹುದು. ಅದ್ಭುತವಾದ ಕುಲು ಕಣಿವೆಯಲ್ಲಿರುವ ಈ ಸರೋವರವು ಹಿಮದಿಂದ ಆವೃತವಾದ ಪರ್ವತಗಳಿಂದ ಸುತ್ತವರೆದಿದೆ. ಇನ್ನು, ಚಾರಣವು ದಟ್ಟವಾದ ಕಾಡುಗಳ ಮೂಲಕ ಮಾಡಬೇಕಾಗಿರುತ್ತದೆ.