ಮನೆ ಕಾನೂನು ವಿಚ್ಛೇದನ ಅರ್ಜಿ ನಿರ್ಧರಿಸಲು ವ್ಯಭಿಚಾರದಲ್ಲಿ ಭಾಗಿಯಾದ ಮೂರನೇ ವ್ಯಕ್ತಿ ವಿಚಾರಣೆ ಅನಗತ್ಯ: ದೆಹಲಿ ಹೈಕೋರ್ಟ್

ವಿಚ್ಛೇದನ ಅರ್ಜಿ ನಿರ್ಧರಿಸಲು ವ್ಯಭಿಚಾರದಲ್ಲಿ ಭಾಗಿಯಾದ ಮೂರನೇ ವ್ಯಕ್ತಿ ವಿಚಾರಣೆ ಅನಗತ್ಯ: ದೆಹಲಿ ಹೈಕೋರ್ಟ್

0

ವಿಚ್ಛೇದನ ಅರ್ಜಿ ನಿರ್ಧಾರಕ್ಕೆ ವ್ಯಭಿಚಾರದಲ್ಲಿ ಭಾಗಿಯಾದ ಮೂರನೇ ವ್ಯಕ್ತಿಯ ಅಗತ್ಯವಿಲ್ಲ, ಅಂತಹ ವ್ಯಕ್ತಿ ಪ್ರಕರಣದಲ್ಲಿ ಸೂಕ್ತ ಪಕ್ಷಕಾರರೂ ಅಲ್ಲ. ಪತಿ ಪತ್ನಿಯರಿಗೆ ಸಂಬಂಧಿಸಿದ ವಿಚ್ಛೇದನ ಅರ್ಜಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸುವಾಗ ವ್ಯಭಿಚಾರದಲ್ಲಿ ಭಾಗಿಯಾದ ಆರೋಪ ಹೊತ್ತ ಮೂರನೇ ವ್ಯಕ್ತಿಯನ್ನು ವಿಚಾರಣೆ ನಡೆಸಬೇಕಿಲ್ಲ ಎಂದು ದೆಹಲಿ ಹೈಕೋರ್ಟ್‌ ಈಚೆಗೆ ತಿಳಿಸಿದೆ.

Join Our Whatsapp Group

ವಿಚ್ಛೇದನದ ಅರ್ಜಿ, ಸಂಸಾರ ನಡೆಸುವ ದಂಪತಿಯ ಸುತ್ತ ಕೇಂದ್ರೀಕೃತವಾಗಿದ್ದು ಇದರಲ್ಲಿ ಸಂಗಾತಿಯ ಸ್ಥಾನಮಾನ ಪಡೆಯದ ವ್ಯಭಿಚಾರದಲ್ಲಿ ಭಾಗಿಯಾದ ಮೂರನೇ ವ್ಯಕ್ತಿ ಮಧ್ಯಪ್ರವೇಶಿಸುವುದಕ್ಕೆ, ಪ್ರಕರಣದಲ್ಲಿ ತನ್ನನ್ನು ಒಳಗೊಳ್ಳಲು ಕೋರುವುದಕ್ಕೆ ಆಸ್ಪದವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ವ್ಯಭಿಚಾರವನ್ನು ಸಾಬೀತುಪಡಿಸಲು ಆಪಾದಿತ ವ್ಯಭಿಚಾರಿಯನ್ನು ಸಾಕ್ಷಿಯಾಗಿ ಕರೆಯಬಹುದು ಅಥವಾ ಉಳಿದ ಸಾಕ್ಷ್ಯಗಳನ್ನು ಕೌಟುಂಬಿಕ ನ್ಯಾಯಾಲಯದ ಮುಂದೆ ಇಡಬಹುದು ಎಂದು ಪೀಠ ಹೇಳಿದೆ.

ತನ್ನ ಪತಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿ ತಿರಸ್ಕರಿಸುವಂತೆ ತಾನು ಸಲ್ಲಿಸಿದ್ದ ಮನವಿಗೆ ಸಮ್ಮತಿಸದ ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಗೆ  ಸಂಬಂಧಿಸಿದಂತೆ ಹೈಕೋಟ್‌ ಈ ವಿಚಾರ ತಿಳಿಸಿದೆ.

ಕ್ರೌರ್ಯ, ವ್ಯಭಿಚಾರ, ಹಾಗೂ ಪರಿತ್ಯಕ್ತತೆ ಎಂಬ ಮೂರು ಕಾರಣಗಳು ವಿಚ್ಛೇದನ ಅರ್ಜಿಗೆ ಪ್ರಮುಖವಾಗುತ್ತವೆ. ಆದರೆ ತನ್ನ ವಿರುದ್ಧ ವ್ಯಭಿಚಾರ ಆರೋಪ ಮಾಡಿಲ್ಲ ಮತ್ತು ವ್ಯಭಿಚಾರದಲ್ಲಿ ಭಾಗಿಯಾದ ಆರೋಪ ಹೊತ್ತ ಮೂರನೇ ವ್ಯಕ್ತಿಯನ್ನು ಕಕ್ಷಿದಾರರನ್ನಾಗಿ ಮಾಡಿಲ್ಲ ಎಂದು ಪತ್ನಿ ನ್ಯಾಯಾಲಯಕ್ಕೆ ತಿಳಿಸಿದರು.

ವಾದ ಆಲಿಸಿದ ನ್ಯಾಯಾಲಯ ವ್ಯಭಿಚಾರದ ಆರೋಪಕ್ಕೆ ಸಂಬಂಧಿಸಿದಂತೆ ವ್ಯತಿರಿಕ್ತವಾದ ಮನವಿಗಳನ್ನು ಸ್ವತಂತ್ರವಾಗಿ ತೆಗೆದುಕೊಂಡರೆ, ವಿಚ್ಛೇದನ ಅರ್ಜಿಯನ್ನು ಒಟ್ಟಾರೆಯಾಗಿ ವಜಾಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಅಲ್ಲದೆ ಕ್ರೌರ್ಯ ನಡೆದಿದೆ ಎಂಬ ಪತಿಯ ಆರೋಪವನ್ನು ಪತ್ನಿ ಪ್ರಶ್ನಿಸಿಲ್ಲ ಎಂದ ಪೀಠ ಮನವಿಯನ್ನು ತಿರಸ್ಕರಿಸಿತು.