ಬೆಂಗಳೂರು : ನಟಿ ಬಿ. ಸರೋಜಾ ದೇವಿ ಅವರು ವಾಸವಾಗಿದ್ದ ಮಲ್ಲೇಶ್ವರ ನಿವಾಸದ ರಸ್ತೆಗೆ ಅವರ ಹೆಸರನ್ನೇ ಇಡಲು ನಿರ್ಧರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇಂದು ಬಿ. ಸರೋಜಾದೇವಿ ಅವರ ನಿವಾಸಕ್ಕೆ ತೆರಳಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಈ ಕುರಿತು ಬಿಬಿಎಂಪಿ ಅಧಿಕಾರಿಗಳೊಡನೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೇ ಪದ್ಮಪ್ರಶಸ್ತಿ ವಿಜೇತರಾಗಿದ್ದ ಬಿ. ಸರೋಜಾದೇವಿಯವರ ಅಂತಿಮ ಸಂಸ್ಕಾರವನ್ನು ಸಕಲ ಪೊಲೀಸ್ ಗೌರವದೊಂದಿಗೆ ನಡೆಸಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
ಚನನ್ನಪಟ್ಟಣದ ದಶವಾರ ಗ್ರಾಮವು ಬಿ.ಸರೋಜಾದೇವಿಯವರ ಹುಟ್ಟೂರಾಗಿದ್ದು, ಅಲ್ಲಿಯೇ ಒಕ್ಕಲಿಗ ಸಂಪ್ರದಾಯದೊಂದಿಗೆ ಅವರ ಅಂತಿಮ ಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ. ಅವರ ತಾಯಿಯ ಸಮಾಧಿ ಪಕ್ಕದಲ್ಲಿಯೇ ಬಿ. ಸರೋಜಾದೇವಿಯವರ ಸಮಾಧಿ ನಿರ್ಮಿಸಲಾಗುತ್ತಿದೆ.
ಅಸಂಖ್ಯಾತ ಅಭಿಮಾನಿಗಳು, ರಾಜಕಾರಣಿಗಳು, ಚಿತ್ರರಂಗದ ಗಣ್ಯರು ಅಂತಿಮ ಸಂಸ್ಕಾರದಲ್ಲಿ ಪಾಲಗೊಳ್ಳಲಿದ್ದಾರೆ.














