ಕಾರವಾರ : ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ 171 ದುರಂತಕ್ಕೀಡಾಗಿ 260 ಮಂದಿ ಮೃತಪಟ್ಟಿದ್ದರು. ಮೃತರ ಆತ್ಮಕ್ಕೆ ಶಾಂತಿಗಾಗಿ ಪಿತೃ ಪಕ್ಷ ಹಿನ್ನೆಲೆಯಲ್ಲಿ ಗೋಕರ್ಣದಲ್ಲಿ ಮೃತರ ಪಿತೃಕಾರ್ಯ ನೆರವೇರಿಸಲಾಯಿತು.
ಜೂನ್ 12 ರಂದು ದುರಂತ ಸಂಭವಿಸಿ 260 ಜನ ಮೃತಪಟ್ಟಿದ್ದರು. ಇದರಲ್ಲಿ ಭಾರತ ಹಾಗೂ ಲಂಡನ್ ಪ್ರಜೆಗಳು ಸಹ ಅಸುನೀಗಿದ್ದರು. ಈ ಘಟನೆ ನಡೆದು ನಾಲ್ಕು ತಿಂಗಳ ನಂತರ ಮೃತರ ಆತ್ಮಕ್ಕೆ ಶಾಂತಿಗಾಗಿ ಪಿತೃ ಪಕ್ಷ ಹಿನ್ನೆಲೆಯಲ್ಲಿ ಗೋಕರ್ಣದಲ್ಲಿ ಮೃತರ ಪಿತೃಕಾರ್ಯ ನೆರವೇರಿಸಲಾಗಿದೆ.
ಪಿತೃಕಾರ್ಯಕ್ಕೆ ಪ್ರಾಮುಖ್ಯತೆ ಹೊಂದಿರುವ ಗೋಕರ್ಣದಲ್ಲಿ ಮೃತರ ಕುಟುಂಬದವರು ಪಿತೃಪಕ್ಷದಲ್ಲಿ ಪಿಂಡ ಪ್ರದಾನ ಮಾಡಿ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಬೇಡಿಕೊಳ್ಳುವುದು ಸಂಪ್ರದಾಯ. ದೇಶ ವಿದೇಶದಿಂದಲೂ ಪಿತೃಪಕ್ಷದ ಸಂದರ್ಭದಲ್ಲಿ ಗೋಕರ್ಣಕ್ಕೆ ಬಂದು ಪಿತೃಕಾರ್ಯ ನಡೆಸಿ, ಇಲ್ಲಿಯೇ ಅಸ್ತಿ ವಿಸರ್ಜಿಸುತ್ತಾರೆ. ಹೀಗಾಗಿ, ಮಹಾಬಲೇಶ್ವರ ದೇವಸ್ಥಾನ ಕಾಶಿಯಷ್ಟೇ ಪ್ರಾಮುಖ್ಯತೆ ಹೊಂದಿದೆ.
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಪುಣ್ಯಾಶ್ರಮದಲ್ಲಿ ಅಹಮದಾಬಾದ್ ವಿಮಾನ ದುರಂತ ಮಡಿದ 260 ಜನರ ಪಿತೃಕಾರ್ಯ ನಡೆಸಲಾಗಿದೆ. ದೇಶದಲ್ಲಿ ನಡೆದ ದೊಡ್ಡ ದುರಂತದ ಸಾಲಿಗೆ ಈ ವಿಮಾನ ದುರಂತ ಸೇರಿಹೋಗಿತ್ತು. ಹೀಗಾಗಿ ದುರಂತದಲ್ಲಿ ಮಡಿದ ಪ್ರತಿಯೊಬ್ಬರ ಹೆಸರಲ್ಲಿ ಎಳ್ಳು-ನೀರಿನ ಅರ್ಗೆ ಸಮರ್ಪಿಸಿ ಪಿಂಡ ಪ್ರದಾನವನ್ನು ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಮುಖ್ಯ ಅರ್ಚಕ ರಾಜು ಅಡಿಯವರು ತಮ್ಮ ಪುಣ್ಯಾಶ್ರಮದಲ್ಲಿ ನೆರವೇರಿಸಿದರು.
ಗೋಕರ್ಣದ ಪುಣ್ಯಾಶ್ರಮದಲ್ಲಿ ಮಹಾಬಲೇಶ್ವರ ದೇವಾಲಯದ ಮುಖ್ಯ ಅರ್ಚಕ ರಾಜುಗೋಪಾಲ ಅಡಿ ಅವರ ನೇತೃತ್ವದಲ್ಲಿ 30 ಜನ ಪುರೋಹಿತರೊಂದಿಗೆ ಈ ಪಿತೃಕಾರ್ಯವನ್ನು ಕೈಗೊಳ್ಳಲಾಯಿತು. ಗುಜರಾತ್‌ನ ಮಾಜಿ ಮುಖ್ಯಮಂತ್ರಿ ದಿವಂಗತ ವಿಜಯ್ ರೂಪಾನಿ ಅವರಿಂದ ಹಿಡಿದು ಲಂಡನ್‌ನ ಮೃತ ಪ್ರಜೆಗಳಿಗೂ ಇಲ್ಲಿ ಪಿತೃಕಾರ್ಯ ನಡೆಸಲಾಯಿತು. ಇಂದು ನೂರಾರು ಜನರಿಗೆ ಮೃತರ ಹೆಸರಿನಲ್ಲಿ ಅನ್ನ ಸಂತರ್ಪಣೆ ಕಾರ್ಯ ಸಹ ಕೈಗೊಳ್ಳಲಾಗಿದೆ.
ಈ ಕಾರ್ಯವನ್ನು ಮುಂದೆ ದೇಶದಲ್ಲಿ ಈರೀತಿಯ ಘಟನೆ ನಡೆಯದಿರಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ದೊರೆಯಬೇಕು ಎಂಬ ಉದ್ದೇಶದಿಂದ ಮಾಡಲಾಗಿದೆ. ಪಿತೃಮಾಸದ ಈ ಸಂದರ್ಭದಲ್ಲಿ ಪುಣ್ಯಾಶ್ರಮದ ಮಹಾಬಲೇಶ್ವರ ದೇವಾಲಯದ ಮುಖ್ಯ ಅರ್ಚಕ ರಾಜು ಗೋಪಾಲ ಅಡಿ ಅವರಿಂದ ಪಿತೃಕಾರ್ಯ ನೆರವೇರಿಸಲಾಗಿದೆ.















