ಅಗರ್ತಲಾ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಭೂಕುಸಿತದಿಂದ ತ್ರಿಪುರಾದಲ್ಲಿ ಮೃತಪಟ್ಟವರ ಸಂಖ್ಯೆ 20 ಕ್ಕೆ ಏರಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಕಂಡು ಕೇಳರಿಯದ ಮಳೆಯಾಗಿದ್ದು ದಕ್ಷಿಣ ತ್ರಿಪುರಾ ಜಿಲ್ಲೆಯ ಸಂತಿರ್‌ಬಜಾರ್‌ನಲ್ಲಿ ಬುಧವಾರ ತಡರಾತ್ರಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಉಂಟಾದ ಭಾರೀ ಭೂಕುಸಿತ ಉಂಟಾಗಿ ಎರಡು ಕುಟುಂಬಗಳ ಏಳು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಮಾಣಿಕ್ ಸಹಾ, ಮಳೆ ಹಾಗೂ ಭೂ ಕುಸಿತದಿಂದ ಮೃತಪಟ್ಟ ಪ್ರತಿ ಸಂತ್ರಸ್ತ ಕುಟುಂಬಕ್ಕೆ ರಾಜ್ಯ ಸರ್ಕಾರ 4 ಲಕ್ಷ ಆರ್ಥಿಕ ನೆರವು ನೀಡಲಿದೆ ಎಂದು ಹೇಳಿದರು.
ತ್ರಿಪುರಾದ ಎಲ್ಲಾ ಎಂಟು ಜಿಲ್ಲೆಗಳಲ್ಲಿ ಸುಮಾರು 65,500 ಜನರು 450 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಮವಾರದಿಂದ ಭೀಕರ ಪ್ರವಾಹಕ್ಕೆ ಸಾಕ್ಷಿಯಾದ ಇಡೀ ರಾಜ್ಯದಲ್ಲಿ 17 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ ಎಂದು ಅವರು ಹೇಳಿದರು.
ಭಾರತೀಯ ಹವಾಮಾನ ಇಲಾಖೆ ಅಗರ್ತಲಾದಲ್ಲಿ ಬುಧವಾರ ಬೆಳಿಗ್ಗೆ 8.30 ರಿಂದ ಗುರುವಾರ ಬೆಳಿಗ್ಗೆ 8.30 ರವರೆಗೆ 233 ಮಿಮೀ ಮಳೆ ದಾಖಲಾಗಿದೆ.