ಗುಜರಾತ್ : ವೇಗವಾಗಿ ಬಂದ ಟ್ರಕ್ ಯಾತ್ರಿಕರ ಮೇಲೆ ಹರಿದ ಪರಿಣಾಮ 6 ಯಾತ್ರಿಕರು ಸೇರಿದಂತೆ 7 ಮಂದಿ ಸಾವನ್ನಪ್ಪಿರುವ ಘಟನೆ ಗುಜರಾತ್ ಹೆದ್ದಾರಿಯಲ್ಲಿ ನಡೆದಿದೆ. ರಾಜ್‌ಕೋಟ್‌ನ ಗಡ್ಕಾ ಗ್ರಾಮದಿಂದ ದೇಕಾವಾಲಾದಲ್ಲಿರುವ ದೇವಸ್ಥಾನಕ್ಕೆ ಯಾತ್ರಿಕರ ಗುಂಪು ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿತ್ತು.
ಸುರೇಂದ್ರನಗರದ ಭಾಸ್ಕರ್‌ಪಾರ ಬಳಿಯ ಲಖ್ತಾರ್-ವಿರಮ್‌ಗಮ್ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಸುಮಾರು ಹತ್ತು ಜನರಿಗೆ ಡಿಕ್ಕಿ ಹೊಡೆದಿದೆ. ರಸ್ತೆಬದಿಯಲ್ಲಿ ಡಂಪರ್ ಟ್ರಕ್ ಟೈರ್ ಬದಲಾವಣೆಗಾಗಿ ನಿಲ್ಲಿಸಲಾಗಿತ್ತು. ಇದನ್ನು ದಾಟುತ್ತಿದ್ದ ವೇಳೆ ಯಾತ್ರಿಕರ ಮೇಲೆ ಹಿಂದಿನಿಂದ ಬಂದ ಟ್ರಕ್ ಹರಿದಿದೆ. ಘಟನೆಯಲ್ಲಿ 7 ಮಂದಿ ಮೃತಪಟ್ಟಿದ್ದಾರೆ.
ಅಪಘಾತದ ಭೀಕರತೆಗೆ ಆರು ಯಾತ್ರಿಕರು ಸ್ಥಳದಲ್ಲೇ ಸಾವನ್ನಪ್ಪಿದರು. ಕೂಡಲೇ ದಾರಿಹೋಕರು ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಟ್ರಕ್ ಟೈರ್ ಬದಲಾಯಿಸುತ್ತಿದ್ದ ಡಂಪರ್ ಟ್ರಕ್ ಚಾಲಕನ ಮೇಲೂ ಹರಿದಿದ್ದು, ವಿರಾಮ್‌ಗಮ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾನೆ. ಇನ್ನು ಅಪಘಾತದಲ್ಲಿ ಮೃತ ಕುಟುಂಬಸ್ಥರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಗಾಯಾಳುಗಳು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.















