ಮನೆ ಅಪರಾಧ ಪೋಕ್ಸೋ ವಿಚಾರಣೆ ವೇಳೆ ಬಯಲಾದ ಸತ್ಯ : ಪುತ್ರಿ ಕೊಂದು ನದಿಗೆ ಎಸೆದ ತಂದೆ

ಪೋಕ್ಸೋ ವಿಚಾರಣೆ ವೇಳೆ ಬಯಲಾದ ಸತ್ಯ : ಪುತ್ರಿ ಕೊಂದು ನದಿಗೆ ಎಸೆದ ತಂದೆ

0

ರಾಯಚೂರು: ಮನುಷ್ಯತ್ವಕ್ಕೂ ಮೀರಿದ ಘಟನೆಯೊಂದು ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ. ಲಿಂಗಸುಗೂರು ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಇದೀಗ ಶೋಕಸಾಗರ ಹರಿಸಿದೆ. ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ತಾನು ಹುಟ್ಟಿಸಿದ ಪುತ್ರಿಯನ್ನೇ ಕೊಲೆ ಮಾಡಿ ನದಿಗೆ ಎಸೆದ ತಂದೆ ಮೇಲೆ ಭೀಕರ ಆರೋಪ ಹೊರವಿದ್ದು, ಪ್ರಕರಣ ತೀವ್ರ ಸದ್ದು ಮಾಡುತ್ತಿದೆ.

ಮೃತಳನ್ನು ರೇಣುಕಾ (18) ಎಂದು ಗುರುತಿಸಲಾಗಿದೆ. ರೇಣುಕಾ ತನ್ನ ಹಳ್ಳಿ ನಿವಾಸಿಯಾದ ಹನುಮಂತ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಜಾತಿ ವ್ಯತ್ಯಾಸದ ಕಾರಣದಿಂದಾಗಿ ತಂದೆ ಲಕ್ಕಪ್ಪ ಕಂಬಳಿ ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ. ತಂದೆಯ ವಿರೋಧದ ನಡುವೆಯೂ, ರೇಣುಕಾ ತನ್ನ ನಿರ್ಧಾರವನ್ನು ಬದಲಿಸದೆ ಹನುಮಂತನನ್ನು ಮದುವೆಯಾಗಬೇಕೆಂದು ಹಠ ಹಿಡಿದಿದ್ದಳು.

ಈ ಸಂಬಂಧ ಲಕ್ಕಪ್ಪ, ಹನುಮಂತನ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ದೂರು ನೀಡಿದ್ದನು, ಏಕೆಂದರೆ ರೇಣುಕಾ ಅಂದಿನ ವೇಳೆಗೆ ಅಪ್ರಾಪ್ತ ವಯಸ್ಸಿನವಳಾಗಿದ್ದಳು. ಪೊಲೀಸರು ಹನುಮಂತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಂತರ ಜಾಮೀನು ಮೇಲೆ ಹೊರಬಂದ ಹನುಮಂತನೊಂದಿಗೆ ರೇಣುಕಾ ಮತ್ತೊಮ್ಮೆ ಓಡಿಹೋದಳು.

ತಂದೆ ಲಕ್ಕಪ್ಪ ಇದರಿಂದ ಬೇಸತ್ತು ಸೆಪ್ಟೆಂಬರ್ 21, 2024 ರಂದು ತನ್ನ ಮಗಳನ್ನು ಹೊಲದಲ್ಲಿ ಬರ್ಬರವಾಗಿ ಕೊಂದು ಶವವನ್ನು ಮೂಟೆ ಕಟ್ಟಿಸಿ ಕೃಷ್ಣಾ ನದಿಗೆ ಎಸೆದಿದ್ದಾನೆ. ಪ್ರಕರಣವನ್ನು ಮುಚ್ಚಿಹಾಕಲು ಲಕ್ಕಪ್ಪ ಪ್ರಯತ್ನಿಸಿದ್ದ. ವಿಚಾರಣೆಗೆ ಹಲವು ಬಾರಿ ಪುತ್ರಿ ಗೈರಾದ ಬಗ್ಗೆ ಕೋರ್ಟ್ ಪ್ರಶ್ನೆ ಮಾಡಿತ್ತು. ಮಗಳನ್ನು ವಿಚಾರಣೆಗೆ ಹಾಜರುಪಡಿಸುವಂತೆ ಕೋರ್ಟ್ ಸೂಚಿಸಿತ್ತು. ಇದೀಗ, ಪೋಕ್ಸೋ ಪ್ರಕರಣದ ವಿಚಾರಣೆ ವೇಳೆ, ಕೊನೆಗೂ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮಗಳನ್ನು ಹೇಗೆ ಕೊಲೆಮಾಡಿ, ಶವವನ್ನು ನದಿಗೆ ಎಸೆದನು ಎಂಬುದು ಕೋರ್ಟ್ ಮುಂದೆ ಬಹಿರಂಗವಾಗಿದೆ. ಈ ಕುರಿತು ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಈಗ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.