ಮೈಸೂರು(Mysuru): ಗಂಗಾ ಕಲ್ಯಾಣ ಯೋಜನೆಯಡಿ 17 ಸಾವಿರ ಕೊಳವೆಬಾವಿಗಳನ್ನು ಕೊರೆಸಿ ಪಲಾನುಭವಿಗಳಿಗೆ ನೀಡಲಾಗುತ್ತಿದೆ. ಹಿಂದೆ ಕೊಳವೆ ಬಾವಿ ಕೊರೆದ ಹಣವನ್ನು ಏಜೆನ್ಸಿಗಳಿಗೆ ನೀಡಲಾಗುತಿತ್ತು ಆದರೆ ಪಾರದರ್ಶಕತೆಯನ್ನು ಕಾಪಾಡಲು ಪಲಾನುಭವಿಗಳ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂದು ಹಿಂದುಳಿದ ವರ್ಗಗಳ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು.
ಇಂದು ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ ವತಿಯಿಂದ ಹಮ್ಮಿಕೊಂಡಿದ್ದ ವಿಭಾಗ ಮಟ್ಟದ ಅರಿವು ಮೂಡಿಸುವ ಕಾರ್ಯಾಗಾರ ಹಾಗೂ ಸವಲತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೆ ಶಿಕ್ಷಣ, ಸಂಪತ್ತು, ಅಭಿವೃದ್ದಿ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿದ್ದವು. ವೈದ್ಯರ ಮಗ ವೈದ್ಯ, ಅಧಿಕಾರಿಯ ಮಗ ಅಧಿಕಾರಿ ಆಗುತ್ತಿದ್ದರು. ಆದರೆ ಡಾ.ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿ ಎಲ್ಲಾ ವರ್ಗದವರಿಗೂ ಅವಕಾಶಗಳನ್ನು ಕಲ್ಪಿಸಿದರು. ಇದರಿಂದ ಇಂದು ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಬಡವರ ಮಕ್ಕಳು ಸಹ ವೈದ್ಯರಾಗುವ ಹಾಗೂ ಅಧಿಕಾರಿಗಳಾಗುವ ಅವಕಾಶ ದೊರಕಿದೆ ಎಂದು ತಿಳಿಸಿದರು.
ಅರ್ಥಿಕವಾಗಿ ಹಿಂದುಳಿದ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳ ಸೌಲಭ್ಯಗಳು ಪಾರದರ್ಶಕವಾಗಿ ದೊರೆಯಬೇಕು ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕರ್ತವ್ಯ ನಿರ್ವಹಿಸುತ್ತಿದೆ. ಯೋಜನೆಗಳ ದುರುಪಯೋಗ ತಡೆಯಲು ಫಲಾನುಭವಿಗಳ ಆದಾರ್ ಕಾರ್ಡ್ ಲಿಂಕ್‌ನ್ನು ಕಡ್ಡಾಯ ಮಾಡಲಾಗಿದೆ. ಒಮ್ಮೆ ಫಲಾನುಭವಿಗಳಾದವರು ಮತ್ತೆ ಅರ್ಜಿ ಸಲ್ಲಿಸಬಾರದು. ಇತರೆ ಅರ್ಹ ಫಲಾನುಭವಿಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಪ್ರತಿಷ್ಟಿತ ಶಾಲೆಗಳಲ್ಲಿ ಪೌರಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿಯನ್ನು ಸರ್ಕಾರ ಹೆಚ್ಚಳ ಮಾಡಿ ಅನುಕೂಲ ಮಾಡಿಕೊಟ್ಟಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಬಿ.ಪಿ.ಎಲ್ ಕುಟುಂಬದವರಿಗೆ 75 ಯುನಿಟ್ ವರೆಗೆ ಉಚಿತ ವಿದ್ಯುತ್‌ನ್ನು ನೀಡಲಾಗುವುದು ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಹೆಚ್.ನಾಗೇಶ್ ಅವರು ಮಾತನಾಡಿ ನಿಗಮದ ವತಿಯಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅರ್ಹರು ಇದರ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ನೇರ ಸಾಲ, ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ಯೋಜನೆ, ಗಂಗ ಕಲ್ಯಾಣ ಯೋಜನೆ, ಗೂಡ್ಸ್ ವಾಹನಗಳ ಖರೀದಿಗೆ ಸಬ್ಸಿಡಿ ಮುಂತಾದ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ದಿ ಹೊಂದಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಲ್ ನಾಗೇಂದ್ರ ಮಾತನಾಡಿ, ಸರ್ಕಾರ ಅರ್ಹ ಫಲಾನುಭವಿಗಳಿಗೆ ದ್ವಿಚಕ್ರ ಮತ್ತು ತ್ರಿ ಚಕ್ರ ವಾಹನ ಖರೀದಿಗೆ ಶೇ 90 ರಷ್ಟು ಸಬ್ಸಿಡಿ ನೀಡುತ್ತಿದೆ. ಜಿಲ್ಲೆಯಲ್ಲಿ ಅತಿ ದೊಡ್ಡ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣವನ್ನು ಮೈಸೂರಿನಲ್ಲಿ ಮಾಡಲಾಗುತ್ತಿದೆ. ಇನ್ನೂ ಅಗತ್ಯವಿರುವ 16.5 ಕೋಟಿ ರೂಗಳನ್ನು ತಂದು 3 ತಿಂಗಳೊಳಗೆ ಭವನವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದ ಒಟ್ಟು 870 ಫಲಾನುಭವಿಗಳಿಗೆ ಸೌಲಭ್ಯ ವಿತರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ನೇರ ಸಾಲ ಯೋಜನೆಯಲ್ಲಿ 150 ಫಲಾನುಭವಿಗಳು, ಉದ್ಯಮ ಶೀಲತಾ ಯೋಜನೆಯಡಿ 150 ಫಲಾನುಭವಿಗಳು, ಗಂಗಾ ಕಲ್ಯಾಣ ಯೋಜನೆಯಡಿ 57 ಫಲಾನುಭವಿಗಳು, ಪ್ರೇರಣಾ ಯೋಜನೆಯಡಿ 500 ಫಲಾನುಭವಿಗಳು ಹಾಗೂ ಐರಾವತ ಯೋಜನೆಯಡಿ 5 ಫಲಾನುಭವಿಗಳು ಸವಲತ್ತುಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಸ್.ಎ.ರಾಮದಾಸ್, ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ಹರ್ಷವರ್ಧನ, ವಿಧಾನ ಪರಿಷತ್ ಶಾಸಕರಾದ ಮಂಜೇಗೌಡ, ಮಹಾ ಪೌರರಾದ ಶಿವಕುಮಾರ್, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಶಿವಣ್ಣ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸಗೌಡ, ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ.ಸುರೇಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.