ಮನೆ ರಾಜ್ಯ ಕೊಳವೆಬಾವಿ ದುರಂತ: 18 ಗಂಟೆ ಕಾರ್ಯಾಚರಣೆಯ ನಂತರ ಮಗು ರಕ್ಷಣೆ

ಕೊಳವೆಬಾವಿ ದುರಂತ: 18 ಗಂಟೆ ಕಾರ್ಯಾಚರಣೆಯ ನಂತರ ಮಗು ರಕ್ಷಣೆ

0

ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬುಧವಾರ ಕೊಳವೆ ಬಾವಿಗೆ ಬಿದ್ದ ೨ ವರ್ಷದ ಬಾಲಕನನ್ನು ೧೮ ಗಂಟೆಗಳ ನಿರಂತರ ಕಾರ್ಯಾಚರಣೆಯ ನಂತರ ರಕ್ಷಿಸಲಾಗಿದೆ. ಎರಡು ವರ್ಷದ ಸಾತ್ವಿಕ್ ಮುಜಗೊಂಡ ಎಂಬ ಮಗು, ತೆರೆದ ಕೊಳವೆ ಬಾವಿಗೆ ಬಿದ್ದಿತ್ತು. ಸತೀಶ್ ಮತ್ತು ಪೂಜಾ ದಂಪತಿಯ ಮಗನಾಗಿರುವ ಸಾತ್ವಿಕ್ ಏಪ್ರಿಲ್ ೩ರಂದು ಸಂಜೆ ೬ ಗಂಟೆ ಸುಮಾರಿಗೆ ಆಟವಾಡುತ್ತ ಲಚಯ್ಯನ ಹಳ್ಳಿಯಲ್ಲಿ ೧೬ ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿತ್ತು.

Join Our Whatsapp Group

ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಇಂಡಿ ಗ್ರಾಮಾಂತರ ಠಾಣೆಯ ಪೊಲೀಸರು, ಅಗ್ನಿ ಶಾಮಕ ದಳ, ತಾಲೂಕು ಆಡಳಿತಾಧಿಕಾರಿಗಳು ದೌಡಾಯಿಸಿದ್ದರು. ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದರು. ೨ ಬೃಹತ್ ಜೆಸಿಬಿ ಯಂತ್ರಗಳ ಮೂಲಕ ಕಾರ್ಯಾಚರಣೆ ನಡೆಸಲಾಗಿತ್ತು. ಸತತ೧೮ ಗಂಟೆ ಕಾರ್ಯಾಚರಣೆಯ ನಂತರ ಮಗುವನ್ನು ರಕ್ಷಣೆ ಮಾಡಲಾಗಿದೆ. ಕಳೆದ ೧೮ ಗಂಟೆಗಳಿಂದ ಮಗು ಅನ್ನ ನೀರು ಇಲ್ಲದೆ ೧೬ ಅಡಿ ಆಳದಲ್ಲಿ ನರಳಾಡುತ್ತಿತ್ತು. ಮಗುವಿನ ಚಲನವಲನಗಳನ್ನು ಕ್ಯಾಮಾರದಲ್ಲಿ ರಕ್ಷಣಾ ಕಾರ್ಯಾಚರಣೆಯ ತಂಡ ಗಮನಿಸುತ್ತಿತ್ತು. ಮಗು ಕಾಲು ಅಲ್ಲಾಡಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಪೊಲೀಸರ ಪ್ರಕಾರ, ಮಗು ತನ್ನ ಮನೆಯ ಬಳಿ ಆಟವಾಡಲು ಹೋದಾಗ ಬೋರ್‌ವೆಲ್‌ಗೆ ಬಿದ್ದಿದೆ. ಹುಡುಗನು ತಲೆ ಕೆಳಗಾಗಿ ಬಿದ್ದಿದ್ದಾನೆ. ಮಗುವಿನ ಅಳು ಕೇಳಿದ ಯಾರೋ ಕೂಡಲೇ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಆಗ ವಿಷಯ ಬೆಳಕಿಗೆ ಬಂದಿದೆ ಎಂದಿದ್ದಾರೆ. ಬಾಲಕನನ್ನು ರಕ್ಷಿಸಲು ಅಧಿಕಾರಿಗಳು ಅಗೆಯುವ ಯಂತ್ರವನ್ನು ಬಳಸಿ ಬೋರ್‌ವೆಲ್‌ಗೆ ಸಮಾನಾಂತರವಾಗಿ ಸುಮಾರು ೨೧ ಅಡಿ ಆಳದ ಹೊಂಡವನ್ನು ಅಗೆದಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಕೂಡ ಸ್ಥಳದಲ್ಲಿದ್ದಾರೆ. ಸ್ಥಳದಲ್ಲಿ ಜಮಾಯಿಸಿದ ಜನರನ್ನು ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ.