ತುಮಕೂರು: ಲೋಕಸಭೆ ಚುನಾವಣೆ ಹಿನ್ನೆಲೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಇದೀಗ ತುಮಕೂರಿನಲ್ಲಿ ನಡೆದ ಮೈತ್ರಿ ಸಭೆಯಲ್ಲಿ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿದೆ.
ಜಿಲ್ಲೆಯ ತುರುವೇಕೆರೆಯಲ್ಲಿ ನಡೆದ ಸಭೆಯಲ್ಲಿ ಮಾತಿನ ಚಕಮಕಿ ಉಂಟಾಗಿದ್ದು, ಬಿಜೆಪಿ ಮುಖಂಡ ಕೊಂಡಜ್ಜಿ ವಿಶ್ವನಾಥ್ ಅಸಮಾಧಾನ ಹೊರಹಾಕಿದ್ದಾರೆ.
ಕಳೆದ ಬಾರಿ ನಾನು ಸೋಲಲು ವಿಶ್ವನಾಥ್ ಕಾರಣವೆಂದು ಭಾಷಣದ ವೇಳೆ ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪ ಮಾಡಿದ್ದಾರೆ. ಈ ವೇಳೆ ಎಂ.ಟಿ.ಕೃಷ್ಣಪ್ಪ ಆರೋಪಕ್ಕೆ ವಿಶ್ವನಾಥ್ ಸಮಜಾಯಿಷಿ ನೀಡಲು ಮುಂದಾದರು.
ಈ ವೇಳೆ ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಬೇಡವೆಂದರು. ವೇದಿಕೆ ಮುಂಭಾಗದಲ್ಲಿದ್ದ ಜೆಡಿಎಸ್ ಕಾರ್ಯಕರ್ತ ಸತೀಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರ ನಡುವೆ ವಾಗ್ವಾದ ಹಿನ್ನೆಲೆ ಸಭೆಯಲ್ಲಿ ಕೆಲಕಾಲ ಗೊಂದಲ ಉಂಟಾಗಿದ್ದು, ಎಂ.ಟಿ.ಕೃಷ್ಣಪ್ಪ, ಮಸಾಲೆ ಜಯರಾಂ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಮೈತ್ರಿ ಅಂದ್ಮೇಲೆ ಒಂದು ಮಾತು ಬರುತ್ತೆ, ಹೋಗುತ್ತೆ. ಆದರೆ ಅದನ್ನೇ ಮನದಲ್ಲಿ ಇಟ್ಕೊಂಡು ಚುನಾವಣೆಗೆ ಇಳಿದರೆ ಸಂಕಷ್ಟ ಕಟ್ಟಿಟ್ಟ ಬುದ್ದಿ. ಅತ್ತ ಬಿಹಾರದಲ್ಲಿ ಸೀಟು ಹಂಚಿಕೆ ಸುಸೂತ್ರವಾಗಿ ನೆರವೇರಿತ್ತು. ಆದರೆ ಕರ್ನಾಟಕ ವಿಷ್ಯದಲ್ಲಿ ಹಾಗಾಗಿಲ್ಲ. ಎರಡೂ ಪಕ್ಷದಲ್ಲೂ ಸೀಟು ಹಂಚಿಕೆ ಸವಾಲಾಗಿತ್ತು. ಈಗ ಇದಕ್ಕೆಲ್ಲಾ ಬಿಜೆಪಿಯಿಂದ ಸ್ಪಷ್ಟತೆ ಸಿಕ್ಕಿದೆ. ರಾಜ್ಯದಲ್ಲಿ ಜೆಡಿಎಸ್ ಗೆ ಮೂರು ಸೀಟು ಬಿಟ್ಟು ಕೊಡುವ ಬಗ್ಗೆ ಚರ್ಚೆ ಆಗಿದೆ. ಇದೇ ಮಾಹಿತಿಯನ್ನು ಇತ್ತೀಚೆಗೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಹೇಳಿದ್ದರು.
ಬಿಜೆಪಿ, ಜೆಡಿಎಸ್ ಸೀಟು ಹಂಚಿಕೆ ಕಗ್ಗಂಟಿಗೆ ಸದ್ಯ ಹೈಕಮಾಂಡ್ ತೆರೆ ಎಳೆದಿದೆ. ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳನ್ನ ಜೆಡಿಎಸ್‌ಗೆ ನೀಡಿದ್ದಾಗಿ ರಾಧಾ ಮೋಹನ್ ದಾಸ್ ಅಗರ್‌ವಾಲ್ ಹೇಳಿದ್ದರು. ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಜೊತೆಗೂಡಿ ಕೆಲಸ ಮಾಡುವಂತೆ ಬಿಜೆಪಿ ಕಾರ್ಯಕರ್ತರಿಗೆ ರಾಧಾ ಮೋಹನ್ ದಾಸ್ ಖಡಕ್ ಸೂಚನೆ ಕೊಟ್ಟಿದ್ದರು.