ತುಮಕೂರು: ಜ್ವರದಿಂದ ಬಳಲುತ್ತಿದ್ದ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ಮಗು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ವೆಂಕಟೇಗೌಡನ ಪಾಳ್ಯದಲ್ಲಿ ನಡೆದಿದೆ.
ತನು (5), ಮೃತ ದುರ್ದೈವಿ.
ವೆಂಕಟೇಶಗೌಡನ ಪಾಳ್ಯ ನಿವಾಸಿ ಸತೀಶ್ ಹಾಗೂ ಶಿಲ್ಪಾ ದಂಪತಿಗಳ ಪುತ್ರಿ ತನುಗೆ ನಿನ್ನೆ(ಮಂಗಳವಾರ) ರಾತ್ರಿ ಇದ್ದಕ್ಕಿದ್ದಂತೆ ಜ್ವರ ಕಾಣಿಸಿಕೊಂಡಿದ್ದು, ಕೂಡಲೇ ಪೋಷಕರು ಸಿ.ಎಸ್. ಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಮಗು ನರಳಾಡಿದೆ.
ಹಲವು ಗಂಟೆಗಳ ಕಾಲ ವೈದ್ಯರಿಗೆ ಕಾಯ್ದು ಕುಳಿತರು ವೈದ್ಯರು ಆಸ್ಪತ್ರೆಗೆ ಬಾರದೇ ಇದ್ದುದರಿಂದ ಗುಬ್ಬಿ ತಾಲೂಕು ಆಸ್ಪತ್ರೆಗೆ ಪೋಷಕರು ಕರೆದೊಯ್ದಿದ್ದಾರೆ. ಗುಬ್ಬಿ ತಾಲೂಕು ಆಸ್ಪತ್ರೆ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ಬೆಂಗಳೂರಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.
ಸಿ.ಎಸ್. ಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇದ್ದಿದ್ದರೆ ನಮ್ಮ ಮಗು ಸಾವನ್ನಪ್ಪುತ್ತಿರಲಿಲ್ಲ. ಇದು 24/7 ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದ್ದು, ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ನಮ್ಮ ಮಗು ಸಾವನ್ನಪ್ಪಿದೆ. ವೈದ್ಯರ ನಿರ್ಲಕ್ಷ್ಯವೇ ಮಗು ಸಾವಿಗೆ ಕಾರಣ ಎಂದು ಮೃತ ಮಗುವಿನ ಪೋಷಕರು ಆರೋಪಿಸಿದ್ದಾರೆ.
ಘಟನೆ ಸಂಬಂಧ ಸಿ.ಎಸ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.